Home ಟಾಪ್ ಸುದ್ದಿಗಳು ಪತ್ನಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಅಪಘಾತಕ್ಕೆ ಬಲಿ

ಪತ್ನಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಅಪಘಾತಕ್ಕೆ ಬಲಿ

ಆದಿಲಾಬಾದ್​: ಮದುವೆಯಾದ ಮೂರ್ನಾಲ್ಕು ತಿಂಗಳಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಶರಣಾಗಲು ತೆರಳುತ್ತಿದ್ದ ವೇಳೆ ಆತನು ಸಹ ಅನಿರೀಕ್ಷಿತವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಆದಿಲಾಬಾದ್’ನಲ್ಲಿ ನಡೆದಿದೆ.

ಪತ್ನಿ ದೀಪಾಳನ್ನು ಕೊಲೆಗೈದು ಬೈಕಿನಲ್ಲಿ ಠಾಣೆಗೆ ತೆರಳಿದ ಅರುಣ್ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅರುಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಪೊಲೀಸ್​ ಅಧಿಕಾರಿ ಎಂ.ಅಶೋಕ್ ಹಾಗೂ ಸ್ಥಳೀಯರ ಪ್ರಕಾರ, ಮೇ 11ರಂದು ನಿಜಾಮಾಬಾದ್ ಜಿಲ್ಲೆಯ ಬಾಲ್ಕೊಂಡದ ಚೌಹಾಣ್ ಲಕ್ಷ್ಮಿ ಮತ್ತು ಗೋಪಿಚಂದ್ ಅವರ ಕಿರಿಯ ಪುತ್ರಿ ದೀಪಾ ಅವರು ಆದಿಲಾಬಾದ್ ಉಪನಗರ ಬಂಗಾರಗುಡ್ಡದ ಮೋಹಿತೆ ಅರುಣ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯಾಗಿ ಒಂದು ವಾರದ ಬಳಿಕ ಅರುಣ್ ಪತ್ನಿಗೆ ಅನುಮಾನದಿಂದ ಕಿರುಕುಳ ನೀಡಲಾರಂಭಿಸಿದ್ದ. ಆಗಾಗ ಜಗಳ ಮಾಡುತ್ತಿದ್ದರು. ದೀಪಾ ತನ್ನ ತಂದೆಗೆ ಕರೆ ಮಾಡಿ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದರು. ಹೀಗಾಗಿ ಅವರ ತಂದೆ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆಗಸ್ಟ್​ 28ರಂದು ಅರುಣ್ ತನ್ನ ಅತ್ತೆ ಮನೆಗೆ ತೆರಳಿ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಆದಿಲಾಬಾದ್‌ಗೆ ಕರೆತಂದಿದ್ದ.ಶುಕ್ರವಾರ ಬೆಳಗ್ಗೆ ಅರುಣ್ ತನ್ನ ಪತ್ನಿಯೊಂದಿಗೆ ಮತ್ತೆ ಜಗಳವಾಡಿದ್ದಾನೆ. ಆಕೆಯ ಕುತ್ತಿಗೆ ಕೊಯ್ದು, ತಲೆಯನ್ನು ಮಂಚಕ್ಕೆ ಜಜ್ಜಿದ್ದರಿಂದ ಗೃಹಿಣಿ ಸಾವನ್ನಪ್ಪಿದ್ದಾಳೆ. ಬಳಿಕ ಅರುಣ್​ ಅದಿಲಾಬಾದ್ ಗ್ರಾಮಾಂತರ ಪೊಲೀಸರಿಗೆ ಶರಣಾಗಲು ತೆರಳಿದ್ದನು. ಅರುಣ್​ ತಂದೆ ಜೈವಂತ್ ರಾವ್ ತನ್ನ ಮಗನ ಬೈಕ್ ಪತ್ತೆಯಾಗದ ಕಾರಣ ಮಗನಿಗೆ ಕರೆ ಮಾಡಿದ್ದಾರೆ. ಆಗ ಅರುಣ್​ ನಾನು ನನ್ನ ಪತ್ನಿಯನ್ನು ಕೊಂದಿದ್ದು, ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದು ತಂದೆ ಜೈವಂತ್ ರಾವ್​ಗೆ ತಿಳಿಸಿದ್ದಾನೆ. ಕೂಡಲೇ ನೀನು ಮನೆಗೆ ಬರುವಂತೆ ಜೈವಂತ್ ರಾವ್ ಮಗನಿಗೆ ಸೂಚಿಸಿದ್ದಾರೆ. ಅಪ್ಪನ ಮಾತಿನಂತೆ ಮಗ ಅರುಣ್​ ಮನೆಗೆ ಹಿಂತಿರುಗುವಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅರುಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಈ ವಿಷಯವನ್ನು ಅರುಣ್​ ತಂದೆ ಜೈವಂತ್​ ರಾವ್​ಗೆ ತಿಳಿಸಿದ್ದಾರೆ. ನಂತರ ಜೈವಂತ್ ರಾವ್ ತನ್ನ ಸೊಸೆಯನ್ನು ನನ್ನ ಮಗನೇ ಕೊಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಗೃಹಿಣಿ ದೀಪಾ ಅವರ ತಾಯಿ ಲಕ್ಷ್ಮಿ ಅವರ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಮೃತ ಅರುಣ್ ಅವರ ತಂದೆ ಜೈವಂತ್ ರಾವ್ ಮತ್ತು ತಾಯಿ ಪದ್ಮಾ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅದಿಲಾಬಾದ್ ಎರಡನೇ ನಗರ ಪೊಲೀಸರು ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version