Home ಟಾಪ್ ಸುದ್ದಿಗಳು ಪತ್ನಿಯ ಕತ್ತು ಕೊಯ್ದು ಮರಕ್ಕೆ ನೇಣು ಬಿಗಿದು ಪತಿ ಆತ್ಮಹತ್ಯೆ !

ಪತ್ನಿಯ ಕತ್ತು ಕೊಯ್ದು ಮರಕ್ಕೆ ನೇಣು ಬಿಗಿದು ಪತಿ ಆತ್ಮಹತ್ಯೆ !

ರಾಮನಗರ: ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಊರ ಹೊರಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನಹೊಸಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.


ಗುಡ್ಡೆವೀರನಹೊಸಳ್ಳಿ ಗ್ರಾಮದ ದೇಶಿಗೌಡ (44) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಇಂದ್ರ (35) ಕೊಲೆಯಾಗಿದ್ದಾರೆ. ದಂಪತಿಗೆ 16 ವರ್ಷದ ಅಭಿಷೇಕ್‌ ಎಂಬ ಮಗನಿದ್ದಾನೆ. ಗುಡ್ಡೆವೀರನಹೊಸಳ್ಳಿಯ ದೇಶಿಗೌಡ ಪಕ್ಕದ ಬಾಗಿ ನಾಯ್ಕನಹಳ್ಳಿಯ ಇಂದ್ರ ಅವರನ್ನು 18 ವರ್ಷದ ಹಿಂದೆ ವಿವಾಹವಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು.


ಕೋವಿಡ್‌ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಗ್ರಾಮಕ್ಕೆ ವಾಪಸ್‌ ಬಂದು ಕೃಷಿ ಚಟುವಟಿಕೆ, ಕೋಳಿ ಅಂಗಡಿ ಮತ್ತು ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಆದರೂ ಪತ್ನಿ ಇಂದ್ರ ತಾವು ಇಲ್ಲಿ ಇರುವುದು ಬೇಡ. ಬೆಂಗಳೂರಿಗೆ ಹೋಗೋಣವೆಂದು ಗಂಡನಿಗೆ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದೆ ಹಳ್ಳಿಯಲ್ಲೇ ಇರಬೇಕೆಂದು ದೇಶಿಗೌಡ ಹಠ ಹಿಡಿದಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು.


ಅಂಗಡಿ ವ್ಯಾಪಾರ ಮಾಡುತ್ತಿದ್ದ ಪತ್ನಿ ತನಗೆ ಯಾವುದೇ ಹಣ ನೀಡದೆ ತಾನೇ ಇಟ್ಟಿಕೊಳ್ಳುತ್ತಾಳೆ. ತನ್ನನ್ನು ತುಂಬಾ ನಿಕೃಷ್ಟವಾಗಿ ನೋಡುತ್ತಿದ್ದಳು. ಆದ್ದರಿಂದ ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ. ಮನೆಯಲ್ಲಿ ಮಲಗಿದ್ದ ಮಗ ಅಭಿಷೇಕ್‌ ಎದ್ದು ನೋಡಿದಾಗ ತಾಯಿ ಕೊಲೆಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ, ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಹುಡುಕಾಡಿದಾಗ ಜಮೀನಿನಲ್ಲಿ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಬಗ್ಗೆ ಕೋಡಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version