Home ಟಾಪ್ ಸುದ್ದಿಗಳು ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ನೂರಾರು ಕೋಟಿ ರೂ. ಹಗರಣದ ದಾಖಲೆ ಬಿಡುಗಡೆ

ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ನೂರಾರು ಕೋಟಿ ರೂ. ಹಗರಣದ ದಾಖಲೆ ಬಿಡುಗಡೆ

ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್​​ ಸಚಿವರು ಬಿಡುಗಡೆ ಮಾಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಚಿವ ಹೆಚ್​ಕೆ ಪಾಟೀಲ್​ರಿಂದ ದಾಖಲೆ ಬಿಡುಗಡೆ ಮಾಡಲಾಗಿದೆ.

ದಾಖಲೆ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ಇದು. ವಿತ್ ರೆಕಾರ್ಡ್ಸ್ ನಾವು ನಿಮ್ಮ ಮುಂದೆ ಮಂಡಿಸುತ್ತೇವೆ. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೊಟಿಫಿಕೇಷನ್ ಹೊರಡಿಸಿತ್ತು.

26 ಫೆಬ್ರವರಿ 2003ರಲ್ಲಿ ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟಿಫಿಕೇಷನ್​ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ಅದಾದ ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಮುಡಾ ಬಗ್ಗೆ ಚರ್ಚೆಯಾಗ್ತಿದೆ. ಮುಖ್ಯಮಂತ್ರಿಗಳ ಪತ್ನಿ ಮುಡಾಗೆ ನಿವೇಶನಗಳನ್ನ ವಾಪಸ್ ಮಾಡಿದ್ದಾರೆ. ಆದರೂ ಬಿಜೆಪಿಯ ಮುಖಂಡರು ವಾಪಸ್ ಕೊಟ್ಟಿರೋದೆ ಸರಿಯಿಲ್ಲ. ತಪ್ಪನ್ನ ಒಪ್ಪಿಕೊಂಡಂತಾಯ್ತು ಅಂತಾ ಬೇರೆ ಬೇರೆ ಅರ್ಥದಲ್ಲಿ ಮಾತಾಡ್ತಿದ್ದಾರೆ. ಆದ್ರೆ ವಿಪಕ್ಷ ನಾಯಕ ಆರ್‌. ಅಶೋಕ್‌ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಅವಧಿಯಲ್ಲಾದ ಹಗರಣದ ಬಗ್ಗೆ ರಾಜ್ಯದ ಜನರ ಮುಂದಿಡೋಕೆ ಬಂದಿದ್ದೀವಿ ಎಂದು ಹೇಳಿದರು.

Join Whatsapp
Exit mobile version