ಬೆಂಗಳೂರು: ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್‌ಗೆ ಗೌರವ ಡಾಕ್ಟರೇಟ್ ಲಭಿಸಿದೆ. ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಯುನೈಟೆಡ್ ಥಿಯೊಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸುಮಲತಾ ಅಂಬರೀಶ್‌ಗೆ ಡಾಕ್ಟರೇಟ್ ನೀಡಿದೆ.
ಸಮಾಜಸೇವೆ, ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿನ ಸೇವೆಗಾಗಿ ಸುಮಲತಾರಿಗೆ ಈ ಗೌರವ ನೀಡಲಾಗಿದೆ ಎಂದು ಯುನೈಟೆಡ್ ಥಿಯೊಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳಿದೆ.
ಸುಮಲತಾ ಡಾಕ್ಟರೇಟ್ ಸ್ವೀಕರಿಸಿದ ಕಾರ್ಯಕ್ರಮದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದರಿಂದಾಗಿ ತನಗೆ ಇನ್ನೂ ಹೆಚ್ಚಿನ ಸ್ಪೂರ್ತಿ ತುಂಬಿದ್ದು, ಈ ಗೌರವವನ್ನು ಪತಿ ಅಂಬರೀಶ್, ಹೆತ್ತವರು, ಹಿತೈಷಿಗಳು, ರಾಜಕೀಯ ಹಾಗೂ ಸಿನಿಮಾ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.