Home ಟಾಪ್ ಸುದ್ದಿಗಳು ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ

ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ

ಶಿವಮೊಗ್ಗ: ಕಳೆದ ರಾತ್ರಿ ನಗರದ ಭಾರತಿನಗರ ಕಾಲೋನಿಯಲ್ಲಿ ದುಷ್ಕರ್ಮಿಗಳಿಂದ ಬಜರಂಗದಳದ ಕಾರ್ಯಕರ್ತ ಹರ್ಷ (24) ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 4ರಿಂದ 5 ಮಂದಿ ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ. ನಮಗೆ ಮಾಹಿತಿ ಲಭ್ಯವಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದರು.

ಹಿಜಾಬ್ ವಿವಾದಕ್ಕೂ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೂ ಸಂಬಂಧವಿದೆ ಎಂದು ನನಗನಿಸುವುದಿಲ್ಲ. ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ. ತನಿಖೆ ಹಂತದಲ್ಲಿರುವುದರಿಂದ ಯಾರೆಂದು ಹೇಳುವುದಿಲ್ಲ. ಆರೋಪಿಗಳ ಬೆನ್ನತ್ತಿದ್ದು, ಶೀಘ್ರವೇ ಬಂಧಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದರು.

ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಹಿರಿಯ ಪೊಲೀಸ್ ಅಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರೇ ಆಗಲಿ ಇಂತಹ ಹೀನ ಕೃತ್ಯ ನಡೆಸಬಾರದು. ತಪ್ಪು ಮಾಡಿದವರಿಗೆ ಕಾನೂನಿನ ಪಾಠ ಹೇಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಕೊಲೆಯಾದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜನರು ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಶಿವಮೊಗ್ಗದಲ್ಲಿ ಇಂತಹ ದುರದೃಷ್ಟಕರ ಘಟನೆಯಾಗಿರುವುದನ್ನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಸ್ಪಷ್ಟವಾದ ಸಂದೇಶವನ್ನು ಸರ್ಕಾರ, ಪೊಲೀಸ್ ಇಲಾಖೆ ನೀಡಲಿದೆ ಎಂದರು.

ಇಂತಹ ಘಟನೆಯಲ್ಲಿ ಮಾನಸಿಕವಾಗಿ ಭಾವುಕರಾಗುವುದು ಸಹಜ, ತಾಳ್ಮೆ ಕಳೆದುಕೊಳ್ಳುವುದು ಬೇಡ. ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಜನರು ಸಹಕಾರ ನೀಡಬೇಕು. ಪೊಲೀಸರ ಜೊತೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಹರ್ಷನ ಕೊಲೆಗೆ ಕಾರಣ ತನಿಖೆಯಿಂದ ಹೊರಬರಬೇಕಿದೆ. ಆತ ಹಿಂದೂ ಕಾರ್ಯಕರ್ತನಾಗಿದ್ದು ಆರ್ಎಸ್ಎಸ್ ಕಾರ್ಯಕರ್ತ. ಆತನ ಮೇಲೆ ಕೂಡ ಎರಡ್ಮೂರು ಪ್ರಕರಣಗಳಿದ್ದವು ಎಂಬ ಮಾಹಿತಿ ಗೊತ್ತಾಗಿದ್ದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶಿವಮೊಗ್ಗ ನಗರಕ್ಕೆ ಹಿರಿಯ ಅಕಾರಿಗಳು ಬಂದಿದ್ದಾರೆ. ಕೆಎಸ್ ಆರ್ ಪಿ, ರಾಪಿಡ್ ಆಕ್ಷನ್ ಫೋರ್ಸ್ ಕೂಡ ಸ್ಥಳದಲ್ಲಿದೆ ಎಂದರು.

ಯುವಕನ ಕೊಲೆ ಹಿಂದೆ ಸಂಘಟನೆ ಹಿಂದೆ ಕೈವಾಡವಿದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಹರ್ಷನ ಮೇಲೆ ಈ ಹಿಂದೆಯೂ ದಾಳಿಯಾಗಿತ್ತು ಎಂಬ ಮಾಹಿತಿಯಿದೆ. ಪೊಲೀಸರನ್ನು ಅಲರ್ಟ್ ಮಾಡಿದ್ದೇವೆ, ಗಾಂಜಾ, ಮಾದಕ ವಸ್ತುವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮೃತ ಯುವಕ ಹರ್ಷನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಮಾತನಾಡಿ ಘೋಷಣೆ ಮಾಡುತ್ತೇನೆ ಎಂದರು. ಇದಕ್ಕೂ ಮುನ್ನ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Join Whatsapp
Exit mobile version