ಲಾಹೋರ್: ಕಳೆದ ವರ್ಷ ಪಂಜಾಬ್ ಪ್ರಾಂತ್ಯದ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಜುಲೈ 2021 ರಲ್ಲಿ, ಎಂಟು ವರ್ಷದ ಹಿಂದೂ ಬಾಲಕ ಮುಸ್ಲಿಂ ಸೆಮಿನರಿಯನ್ನು ಅಪವಿತ್ರಗೊಳಿಸಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಲಾಹೋರ್ ನಿಂದ ಸುಮಾರು 590 ಕಿ.ಮೀ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದ ಗಣೇಶ ಮಂದಿರ ದೇವಾಲಯದ ಮೇಲೆ ನೂರಾರು ಜನರು ದಾಳಿ ನಡೆಸಿದ್ದರು.
ಉದ್ರಿಕ್ತ ಗುಂಪು ಆಯುಧಗಳು, ದೊಣ್ಣೆಗಳು ಮತ್ತು ಬಿದಿರುಗಳನ್ನು ಹಿಡಿದು, ದೇವಾಲಯದಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ದೇವಾಲಯದ ಒಂದು ಭಾಗವನ್ನು ಧ್ವಂಸಗೊಳಿಸಿ ಸುಟ್ಟುಹಾಕಿತು. ದೇವಾಲಯವನ್ನು ಅಪವಿತ್ರಗೊಳಿಸುವಾಗ ದಾಳಿಕೋರರು ವಿಗ್ರಹಗಳು, ಗೋಡೆಗಳು, ಬಾಗಿಲುಗಳು ಮತ್ತು ವಿದ್ಯುತ್ ಫಿಟ್ಟಿಂಗ್ ಗಳನ್ನು ಹಾನಿಗೊಳಿಸಿದ್ದರು.
ಬುಧವಾರ, ಎಟಿಸಿ ನ್ಯಾಯಾಧೀಶ (ಬಹವಾಲ್ಪುರ) ನಾಸಿರ್ ಹುಸೇನ್ ಅವರು ತೀರ್ಪನ್ನು ಪ್ರಕಟಿಸಿದರು. ನ್ಯಾಯಾಧೀಶರು 22 ಶಂಕಿತರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು ಮತ್ತು ಉಳಿದ 62 ಜನರನ್ನು ಖುಲಾಸೆಗೊಳಿಸಿದ್ದಾರೆ.