ಉಡುಪಿ: ಪ್ರಾರ್ಥನಾ ಕೇಂದ್ರಕ್ಕೆ ಹಿಂದೂ ಜಾಗರಣಾ ವೇದಿಕೆ ನಡೆಸಿದ ದಾಳಿಯನ್ನು ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ಅಕ್ರಮ ಪ್ರವೇಶ ಮಾಡಿ ಮಹಿಳೆಯರು ಮಕ್ಕಳು ಮತ್ತು ಇತರರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದ ಸುಳ್ಳು ಆರೋಪ ಮಾಡಿದ ಜನರ ವಿರುದ್ಧ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
“ನಮ್ಮ ಕ್ರೈಸ್ತ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರದ ಪ್ರಾರ್ಥನೆ ವಿಧಿವಿಧಾನಗಳು ಮಾಡುವ ಸಮಯದಲ್ಲಿ ಒಂದು ಗುಂಪು ಜನ ಭಯೋತ್ಪಾದಕರಂತೆ ಒಳಗೆ ನುಗ್ಗಿ ದೇವರಿಗೆ ಸಲ್ಲಿಸುತ್ತಿರುವ ಪ್ರಾರ್ಥನೆ ಬಲವಂತ ನಿಲ್ಲಿಸಿ ನೀವು ಮತಾಂತರ ಮಾಡುತ್ತೀರಿ ಎಂದು ಸುಳ್ಳು ಆರೋಪ ಮಾಡಿ ಮಹಿಳೆಯರೊಂದಿಗೆ ಅಸಭ್ಯಬಾಗಿ ವರ್ತಿಸಿ ಅವರಿಗೆ ಹೊಡೆದು ಇತರರಿಗೆ ಬೆದರಿಕೆ ಒಡ್ಡಿ ದೈಹಿಕ ಹಲ್ಲೆ ಮಾಡಿ ಭಯಹುಟ್ಟಿಸಿದಂತಹ ಭಯೋತ್ಪಾದಕ ಗುಂಪನ್ನು ತಕ್ಷಣ ಬಂಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷ ಕೊಡಿಸುವ ಕಾರ್ಯ ಪೊಲೀಸ್ ಇಲಾಖೆ ತಕ್ಷಣ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಪ್ರಗತಿ ಸೆಂಟರ್ ಮುಖ್ಯಸ್ಥ ಬೆನೆಡಿಕ್ಟ್ ನೀಡಿದ ದೂರಿನಂತೆ 15 ಮಂದಿ ಹಿಂದೂ ಕಾರ್ಯಕರ್ತರ ವಿರುದ್ಧ ಹಾಗೂ ಪ್ರತಿಯಾಗಿ ಸುನಿಲ್ ಎಂಬವರು ನೀಡಿದ ದೂರಿನಂತೆ ಬೆನೆಡಿಕ್ಟ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.