Home ಟಾಪ್ ಸುದ್ದಿಗಳು ಗ್ರಾಮದಲ್ಲಿ ಮೊತ್ತ ಮೊದಲ ಮಸೀದಿ ನಿರ್ಮಿಸಲು ಜಮೀನು ನೀಡಿದ ಹಿಂದೂ ಕುಟುಂಬ

ಗ್ರಾಮದಲ್ಲಿ ಮೊತ್ತ ಮೊದಲ ಮಸೀದಿ ನಿರ್ಮಿಸಲು ಜಮೀನು ನೀಡಿದ ಹಿಂದೂ ಕುಟುಂಬ

ಚಂಡೀಗಡ: ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ರಾಂಪುರ ಗುಜ್ರನ್ ಗ್ರಾಮದ ಹಿಂದೂ ಕುಟುಂಬವು ಈ ಊರಿನ ಮೊದಲು ಮಸೀದಿ ಕಟ್ಟಲು ಸ್ಥಳ ದೇಣಿಗೆ ನೀಡಿ ಸೌಹಾರ್ದತೆ ಮೆರೆದಿದೆ.

 ಅಲ್ಲದೆ ಅಲ್ಲಿನ ಹಿಂದೂ ಸಮುದಾಯದವರು ಮಸೀದಿ ಕಟ್ಟಲು ಅಗತ್ಯದ ವಸ್ತುಗಳು ಮತ್ತು ಹಣವನ್ನು ಸಹ ಸಂಗ್ರಹಿಸಿ ಕೊಟ್ಟಿದ್ದಾರೆ.  ಇಲ್ಲಿನ ಒಂದು ಡಜನ್ ನಷ್ಟು ಮುಸ್ಲಿಂ ಕುಟುಂಬಗಳು ನಮಾಝ್ ನಿರ್ವಹಿಸಲು ಇಲ್ಲಿಂದ ಮೂರು ಕಿಲೋಮೀಟರ್ ದೂರದ ದಿಬ್ರಾ ಪಟ್ಟಣಕ್ಕೆ ಹೋಗುತ್ತಲಿವೆ. ಇನ್ನು ಮುಂದೆ ಇದೇ ಪ್ರದೇಶದಲ್ಲಿ ನಮಾಝ್ ನಿರ್ವಹಿಸಲು ಸಾಧ್ಯವಾಗಲಿದೆ.

ನಾವು ಗ್ರಾಮ ಪಂಚಾಯತಿ ಎದುರು ಮಸೀದಿಗೆ ಜಾಗಕ್ಕಾಗಿ ಮನವಿ ಸಲ್ಲಿಸಿದ್ದೆವು. ಮೂರು ವರ್ಷಗಳ ಹಿಂದೆಯೇ ಪಂಚಾಯತ್ ನಲ್ಲಿ ಅದು ಪಾಸಾಗಿತ್ತು. ಆದರೆ ನಂತರ ಜಾಗ ಸಿಗಲೇ ಇಲ್ಲ ಎಂದು ಮುಹಮ್ಮದ್ ಜಫಾರ್ ಖಾನ್ ಹೇಳಿದರು.

ನಾಲ್ಕು ವಾರಗಳ ಹಿಂದೆ ಗ್ರಾಮಸ್ಥರು ಇಲ್ಲಿ ಸೇರಿದಾಗ ನಾವು ನಮ್ಮ ಮಸೀದಿ ಪ್ರಶ್ನೆಯನ್ನು ಮುಂದಿಟ್ಟೆವು. ಹಿಂದೂ ಸಹೋದರರಾದ 54ರ ಹರೆಯದ ಬಲ್ಬೀರ್ ಸಿಂಗ್ ಮತ್ತು 62ರ ಹರೆಯದ ಹರ್ಮೇಶ್ ಸಿಂಗ್ ತಾವು ಜಾಗ ನೀಡುವುದಾಗಿ ಹೇಳಿದರು. ಅವರಿಗೆ ಧನ್ಯವಾದ ಹೇಳಲು ನಮ್ಮಲ್ಲಿ ಶಬ್ದಗಳೇ ಇರಲಿಲ್ಲ ಎಂದರು ಜಫಾರ್ ಖಾನ್.

ಅವರ 75 ವರ್ಷ ಪ್ರಾಯದ ಮಾವ ಹನೀಫ್ ಖಾನ್ ಕೂಡ ಅದನ್ನೇ ಹೇಳಿದರು. “ಈ ಬೆಲೆ ಕಟ್ಟಲಾಗದ ಕೊಡುಗೆಗೆ ನಾವು ನಮ್ಮ ಹಿಂದೂ ಸಹೋದರರಿಗೆ ಆಭಾರಿಯಾಗಿದ್ದೇವೆ. ನಾವು ಮಸೀದಿಯಲ್ಲಿ ಪ್ರಾರ್ಥಿಸುವಾಗ ಅವರಿಗಾಗಿಯೂ ಪ್ರಾರ್ಥಿಸುವುದಾಗಿ ಆಶ್ವಾಸನೆ ನೀಡುತ್ತೇವೆ” ಎಂದು ಹೇಳಿದರು.

ಇದು ನಮಗೆ ಮಾತ್ರ ಸಂದ ಕೊಡುಗೆಯಲ್ಲ, ಮುಂದಿನ ತಲೆಮಾರಿಗೂ ನೀಡಲಾಗಿರುವ ಕೊಡುಗೆಯಾಗಿದೆ. ಇದಕ್ಕಾಗಿ ನಾವು ಹಿಂದೂ ಸಹೋದರರಿಗೆ ಋಣಿಯಾಗಿದ್ದೇನೆ ಎಂದ ಅವರು ನನ್ನ ಮೂವರು ಮಕ್ಕಳಾದ ಸಲೀಂ ಖಾನ್, ರೋಸಿ ಖಾನ್, ಉಸ್ಮಾನ್ ಖಾನ್ ಈ ಮಸೀದಿ ಕಟ್ಟಿದ ಕೂಡಲೆ ಇಲ್ಲೇ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದರು. 

ಊರಿನಲ್ಲಿ ನಮ್ಮ ಮುಸ್ಲಿಂ ಸಹೋದರರಿಗೊಂದು ಪ್ರಾರ್ಥನಾ ನೆಲೆ ಇರಲಿ ಎಂದು ನಾವು ಸ್ಥಳ ಕೊಡುತ್ತಿದ್ದೇವೆ ಎಂದು ಬಲ್ಬೀರ್ ಹೇಳಿದರು.

“ ಈ ದಾನದ ಜಾಗವು ಮೂರು ಬಿಸ್ವಾಸ್ ಇದ್ದು, ಇದನ್ನು ಮಸೀದಿ ಕಟ್ಟಲು ಬಳಸಲು ಸೂಕ್ತವಾಗಿದೆ” ಎಂದು ಬಲ್ಬೀರ್ ಹೇಳಿದರು.

“ಈ ಊರಿನಲ್ಲಿ 125 ಕುಟುಂಬಗಳಿವೆ, ಹೆಚ್ಚಿನವು ಹಿಂದೂ ಮನೆಗಳು. ನಮ್ಮಲ್ಲಿ ಒಂದು ರಾಧಾಕಿಶನ್ ದೇವಾಲಯವಿದೆ; ಈಗ ಒಂದು ಮಸೀದಿಯು ಆಗಲಿದೆ ಎಂದು ಅವರ ಸಹೋದರ ಹರ್ಮೇಶ್ ಸಿಂಗ್ ಹೇಳಿದರು.

ನಾವು ಮಸೀದಿ ಕಟ್ಟಲು ಒಂದಷ್ಟು ಹಣ ಸಂಗ್ರಹಿಸಿ ಕೊಡುತ್ತೇವೆ ಮತ್ತು ಇಟ್ಟಿಗೆ, ಕಬ್ಬಿಣ ಒದಗಿಸುವುದಾಗಿಯೂ ಅವರು ಹೇಳಿದರು.

ಮೇಸ್ತ್ರಿ ಮೆಹ್ತಾಬ್ ಖಾನ್ ಮಸೀದಿ ಕಟ್ಟುವ ಕೆಲಸ ವಹಿಸಿಕೊಂಡಿದ್ದು, ಕಚ್ಚಾ ವಸ್ತುಗಳು ಸರಿಯಾಗಿ ಬಂದಲ್ಲಿ ಇನ್ನು ಆರೇ ತಿಂಗಳಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದರು. ಇದೇ ವೇಳೆ ಮಲೇರ್ ಕೋಟ್ಲಾದ ಎನ್ ಜಿಓ, ಇದರ್ ತಮೀರ್ ಮಸೀದಿ ಸಮಿತಿಗಳು ಸಹ ಈ ಹೊಸ ಮಸೀದಿ ಕಟ್ಟಡಕ್ಕೆ ನೆರವಿನ ಹಸ್ತ ಚಾಚಿವೆ.

ಭಾನುವಾರ ಎನ್ ಜಿಓ- ಸರಕಾರೇತರ ಸಂಸ್ಥೆಯ ಮುಫ್ತಿ ದಿಲ್ಶಾದ್ ಖಾಸ್ಮಿಯವರು ಮಸೀದಿಗೆ ಅಡಿಗಲ್ಲು ನೆರವೇರಿಸಿದರು. ಇಲ್ಲಿ ಮಸೀದಿ ಆಗುವುದರಿಂದ ಅವರೆಲ್ಲ ಆನಂದದಿಂದ ಇದ್ದಾರೆ. ಇದಕ್ಕೆ ಹಿಂದೂ ಸಮಾಜದವರು ಜಾಗ ನೀಡಿರುವುದು ಮೆಚ್ಚತಕ್ಕ ಕಾರ್ಯವಾಗಿದೆ. ದೇಶ ವಿಭಜನೆಗೆ ಮೊದಲು ಈ ಗ್ರಾಮ ಹುಟ್ಟಿತ್ತು. ವಿಭಜನೆ ಆದಾಗ ಇಲ್ಲಿನ ಹಿಂದೂಗಳು ಕೆಲವು ಮುಸ್ಲಿಂ ಕುಟುಂಬಗಳಿಗೆ ಊರಲ್ಲಿ ನೆಲೆಸಲು ಅವಕಾಶ ಮಾಡಿದ್ದರು. ಈ ಊರಿನಲ್ಲಿ ಯಾವುದೇ ಸಿಖ್ ಕುಟುಂಬ ಇಲ್ಲ.

Join Whatsapp
Exit mobile version