Home ಕರಾವಳಿ ಹಿಜಾಬ್ ಸಂಘರ್ಷ । ಮುಸ್ಲಿಮ್ ವಿದ್ಯಾರ್ಥಿನಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೀಡಿಯೋ ಚಿತ್ರೀಕರಿಸಿದ ಪತ್ರಕರ್ತನ ವಿರುದ್ಧ...

ಹಿಜಾಬ್ ಸಂಘರ್ಷ । ಮುಸ್ಲಿಮ್ ವಿದ್ಯಾರ್ಥಿನಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೀಡಿಯೋ ಚಿತ್ರೀಕರಿಸಿದ ಪತ್ರಕರ್ತನ ವಿರುದ್ಧ ಎಫ್.ಐ.ಆರ್

ಉಡುಪಿ: ಹಿಜಾಬ್ ಕುರಿತ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ಮಧ್ಯೆ, ಕುಟುಕು ಕಾರ್ಯಾಚರಣೆಯ ನೆಪದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯ ಮನೆಗೆ ಅಕ್ರಮ ಪ್ರವೇಶ ಮಾಡಿದ ಮಾಧ್ಯಮ ವರದಿಗಾರನ ವಿರುದ್ಧ ಉಡುಪಿ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.

ಈ ಸಂಬಂಧ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಎಂಬಾಕೆ ನೀಡಿದ ದೂರಿನನ್ವಯ ಏಷಿಯಾನೆಟ್ ಸುವರ್ಣ ನ್ಯೂಸ್ ನ ವರದಿಗಾರನ ವಿರುದ್ಧ ಐಪಿಸಿ ಸೆಕ್ಷನ್ 448 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ, ಸ್ಟಿಂಗ್ ಅಪರೇಶನ್ ಎಂಬ ಹೆಸರಿನಲ್ಲಿ ವರದಿಗಾರ್ತಿ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅನುಮತಿ ನೀಡುವ ಕುರಿತು ಪ್ರಸ್ತುತ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿದಾರರಲ್ಲಿ ಆಲಿಯಾ ಅಸ್ಸಾದಿ ಕೂಡ ಒಬ್ಬರು ಎಂಬುದು ಗಮನಾರ್ಹ.

ಹಿಜಾಬ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆಯ ಪ್ರಾರಂಭವಾದ ದಿನದಿಂದಲೂ ಹಿಂಬಾಲಿಸುತ್ತಿದ್ದ ಕೆಲವು ಆಯ್ದ ಮಾಧ್ಯಮ ಸಂಸ್ಥೆಗಳು ಆಲಿಯಾ ಅಸ್ಸಾದಿ ಸೇರಿದಂತೆ ಹಲವಾರು ಇತರ ಮುಸ್ಲಿಮ್ ಮಹಿಳೆಯರಿಗೆ ನಿರಂತರ ಕಿರುಕುಳ ನೀಡುತ್ತಲೇ ಬಂದಿದ್ದರು.

ಇದಕ್ಕೂ ಮೊದಲು ಇನ್ನೊಂದು ಪ್ರಕರಣದಲ್ಲಿ ಹಿಜಾಬ್ ಧರಿಸಿದ ಸಣ್ಣ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿಕೊಂಡು ಹೋಗಿ ವೀಡಿಯೋ ಚಿತ್ರೀಕರಿಸಿದ ಪತ್ರಕರ್ತನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ಹೈಕೋರ್ಟ್‌ನಲ್ಲಿರುವ ಪ್ರಕರಣ ಈ ವಾರದ ಅಂತ್ಯಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Join Whatsapp
Exit mobile version