Home ಕರಾವಳಿ ಹಿಜಾಬ್ ವಿಚಾರ: ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಸಂತ್ರಸ್ತ ವಿದ್ಯಾರ್ಥಿಗಳ ಆಗ್ರಹ

ಹಿಜಾಬ್ ವಿಚಾರ: ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಸಂತ್ರಸ್ತ ವಿದ್ಯಾರ್ಥಿಗಳ ಆಗ್ರಹ

ಉಡುಪಿ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯು ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ನ್ಯಾಯಾಲಯದ ಆದೇಶ ಬರುವವರೆಗೆ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡುವಂತೆ ಸಂತ್ರಸ್ತ ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದಾರ್ಥಿಗಳು, ಹಿಜಾಬ್ ಕುರಿತು ವಿಚಾರಣೆಯು ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದ ವರೆಗೆ ಪಿಯುಸಿಯ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಫೆಬ್ರವರಿ 28ಕ್ಕೆ ಪ್ರಾಯೋಗಿಕ ಪರೀಕ್ಷೆಯನ್ನು ಆಯೋಜಿಸಲಾಗಿದ್ದು, ಪಠ್ಯದ ಅಂಶಗಳು ಇನ್ನೂ ಪೂರ್ತಿಯಾಗಿಲ್ಲ. ಪರೀಕ್ಷೆಗಳಿಗೆ ಬೇಕಾದ ಸಲಕರಣೆಗಳು ಲಭ್ಯವಿಲ್ಲದ ಕಾರಣ ಮನೆಯಲ್ಲಿ ಅಧ್ಯಯನ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದ ವರೆಗೆ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡುವಂತೆ ಸಂತ್ರಸ್ತ ವಿದಾರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿಗಳು ಸಲ್ಲಿಸಿದ ವಿಜ್ಞಾಪನೆಗೆ ಕಾಲೇಜು ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿ.ಯು. ಪರೀಕ್ಷಾ ಮಂಡಳಿ ಚರ್ಚೆ ನಡೆಸುವ ಭರವಸೆ ನೀಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶ ಯಾರ ಪರವಾಗಿ ಬರಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂತ್ರಸ್ತ ವಿದ್ಯಾರ್ಥಿಗಳು, ಪ್ರಸಕ್ತ ನ್ಯಾಯಾಲಯವು ನಮ್ಮ ಅಳಲನ್ನು ಆಲಿಸಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿದೆ. ಈ ತೀರ್ಪು ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಆರಂಭವಾದ ಸಣ್ಣ ವಿಚಾರವನ್ನು ಬಿಜೆಪಿ ತನ್ನ ರಾಜಕೀಯ ಲಾಭಕೋಸ್ಕರ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ ರಾಜ್ಯದ ಕೆಲವು ಮಾಧ್ಯಮಗಳಿಂದಾಗಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದ್ದು, ನಮ್ಮ ಅನುಮತಿಯಿಲ್ಲದೆ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡುತ್ತಿರುವುದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಖಾಸಗಿತನಕ್ಕೆ ಧಕ್ಕೆಯಾಗದಂತೆ ವರ್ತಿಸುವಂತೆ ಸುದ್ದಿಗಾರರ ಮೂಲಕ ಒತ್ತಾಯಿಸಿದ್ದಾರೆ.

Join Whatsapp
Exit mobile version