ಹಿಜಾಬ್ ನಿರ್ಬಂಧ: ಸುಪ್ರೀಂಕೋರ್ಟ್ ಪೀಠದಿಂದ ಭಿನ್ನ ತೀರ್ಪು: ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾವಣೆ

Prasthutha|

►ಹಿಜಾಬ್ ವಿದ್ಯಾರ್ಥಿನಿಯರ ಆಯ್ಕೆ ಪ್ರಶ್ನೆ ಎಂದ ನ್ಯಾಯಮೂರ್ತಿ ಸುಧಾಂಶು

- Advertisement -

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠದ ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವುದರಿಂದ  ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಲಾಗಿದೆ.

ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ವಜಾಗೊಳಿಸಿದರೆ, ಸುಧಾಂಶು ಧುಲಿಯಾ ಅವರು ಹಿಜಾಬ್ ನಿರ್ಬಂಧ ಕುರಿತು ಸರ್ಕಾರದ ಆದೇಶವನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ. ಧಾರ್ಮಿಕ ಹಕ್ಕು ಮತ್ತು ಆಯ್ಕೆ ಸ್ವಾತಂತ್ರ್ಯದ ವಿಷಯದಲ್ಲಿ ಹೈಕೋರ್ಟ್ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಜಾಬ್ ಎಂಬುದು ವಿದ್ಯಾರ್ಥಿನಿಯರ ಆಯ್ಕೆ ಪ್ರಶ್ನೆಯಾಗಿದೆ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.

- Advertisement -

ಅಗತ್ಯ ಧಾರ್ಮಿಕ ಆಚರಣೆ ಕುರಿತು ಚಿಂತಿಸುವ ಅಗತ್ಯವಿಲ್ಲ ಮತ್ತು ನ್ಯಾಯಾಲಯ (ಕರ್ನಾಟಕ ಹೈಕೋರ್ಟ್‌) ತಪ್ಪು ಹೆಜ್ಜೆ ಇರಿಸಿದೆ. ನನಗೆ ಹೆಣ್ಣು ಮಗುವಿನ ಶಿಕ್ಷಣವೇ ಉನ್ನತ ಆದ್ಯತೆಯ ವಿಚಾರ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು.
ನಾನು ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸುತ್ತಿದ್ದು (ರಾಜ್ಯ) ಸರ್ಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇನೆ ಎಂದು ಧುಲಿಯಾ ಹೇಳಿದರು.
ಆದರೆ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ವಜಾಗೊಳಿಸುವುದಾಗಿ ಹೇಳಿ ತೀರ್ಪು ನೀಡಿದರು.

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಸರ್ಕಾರದ ಆದೇಶ ಎತ್ತಿಹಿಡಿದರೆ, ನ್ಯಾ. ಸುಧಾಂಶು ಧುಲಿಯಾ ಅದನ್ನು ಬದಿಗೆ ಸರಿಸಿದರು.

“ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೇಲ್ಮನವಿದಾರರ ವಿರುದ್ಧ ತೀರ್ಪು ನೀಡುತ್ತಿದ್ದೇನೆ. ಅರ್ಜಿಯನ್ನು ವಜಾಗೊಳಿಸುತ್ತಿರುವೆ ಎಂದು ನ್ಯಾ. ಹೇಮಂತ್‌ ಗುಪ್ತಾ ತಿಳಿಸಿದರು. 

ಆದರೆ ನ್ಯಾಯಮೂರ್ತಿ ಧುಲಿಯಾ ಅವರು ಮೇಲ್ಮನವಿಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರದ ಆದೇಶ ರದ್ದುಗೊಳಿಸಿದರು. ಪರಿಣಾಮ ಈಗ ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

“ವಿಭಿನ್ನ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ನಿರ್ದೇಶನಗಳಿಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಸಲ್ಲಿಸಿ” ಎಂದು ಪೀಠ ನಿರ್ದೇಶಿಸಿತು.

ನ್ಯಾಯಮೂರ್ತಿ ಗುಪ್ತಾ ತಮ್ಮ ತೀರ್ಪಿನಲ್ಲಿ ಹನ್ನೊಂದು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಡಿ ಅಗತ್ಯ ಧಾರ್ಮಿಕ ಆಚರಣೆ (ಇಆರ್‌ ಪಿ) ಅಲ್ಲ. ರಾಜ್ಯ ಸರ್ಕಾರದ ಆದೇಶ (ವಿದ್ಯಾರ್ಥಿಗಳು) ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದ ಅವರು ಮೇಲ್ಮನವಿಗಳನ್ನು ವಜಾಗೊಳಿಸಿದರು.

ಆದರೆ ನ್ಯಾಯಮೂರ್ತಿ ಧುಲಿಯಾ ಇಆರ್‌ಪಿ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. (ಕರ್ನಾಟಕ) ಹೈಕೋರ್ಟ್‌ ತಪ್ಪು ಹೆಜ್ಜೆ ಇರಿಸಿದೆ ಎಂದರು.

“ಇದು ಕೇವಲ ಆಯ್ಕೆಯ ಪ್ರಶ್ನೆಯಾಗಿತ್ತು. ಬಿಜೋಯ್ ಇಮ್ಯಾನುಯೆಲ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನುಪಾತವು ಪ್ರಕರಣದ ಕುರಿತು ಸಂಪೂರ್ಣವಾಗಿ ಹೇಳುತ್ತದೆ” ಎಂದು ನ್ಯಾಯಮೂರ್ತಿ ಧುಲಿಯಾ ತೀರ್ಪು ನೀಡಿದರು.

ಮಾರ್ಚ್ 15ರಂದು ಉಡುಪಿಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ ಹಿಜಾಬ್ ಇಸ್ಲಾಮಿನ ಅಗತ್ಯ ಭಾಗವಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಉಡುಪಿ ಸರ್ಕಾರಿ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಮ್ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.

 ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು, ಈ ಪ್ರಕರಣದ ಸುದೀರ್ಘ ವಾದ ವಿವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.

Join Whatsapp
Exit mobile version