ಬೆಂಗಳೂರು: ರಾಜ್ಯದೆಲ್ಲೆಡೆ ಹಿಜಾಬ್ ಗೆ ಅವಕಾಶ ನಿರಾಕರಿಸಿದ್ದರಿಂದ ಶುಕ್ರವಾರ ಕೂಡ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದ್ದು, ತೀರ್ಪು ನೀಡುವರೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಆಗಮಿಸದಂತೆ ಮಧ್ಯಂತರ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡ ಬಂದ ವಿದ್ಯಾರ್ಥಿಗಳನ್ನು ಗೇಟ್ ನಲ್ಲಿಯೇ ತಡೆದು ನಿಲ್ಲಿಸಿದ ಸಿಬ್ಬಂದಿಗಳು ಹಿಜಾಬ್ ತೆಗೆಯುವಂತೆ ಬಲವಂತ ಪಡಿಸಿದ್ದರು.
ಶಾಲಾ ಆಡಳಿತ ಮಂಡಳಿಯ ಅಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಮಧ್ಯೆ ಶುಕ್ರವಾರ ಕೊಡಗಿನ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಹಾಗೂ ಕಾಲೇಜು ಪ್ರಾಂಶುಪಾಲ ವಿಜಯ ಅವರ ನಡುವೆ ವಾಗ್ವಾದ ನಡೆಯಿತು.
ವಿದ್ಯಾರ್ಥಿನಿಯರು ಕೊಠಡಿ ಪ್ರವೇಶಿಸಲು ಮುಂದಾದ ವೇಳೆ ಪ್ರಾಂಶುಪಾಲರು ಅದಕ್ಕೆ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ವಾಗ್ವಾದ ನಡೆಯಿತು.
ಹೈಕೋರ್ಟ್ ಆದೇಶದಂತೆ, ‘ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ’ ಎಂದು ಪ್ರಾಂಶುಪಾಲರು ಹೇಳಿದರು. ಆದರೂ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಲಿಲ್ಲ.
ಅಂಜುಮನ್ ಇ ಇಸ್ಲಾಂ ಪಾಲಿಟೆಕ್ನಿಕ್ ಕಾಲೇಜು, ಗದಗ ಮತ್ತು ಶ್ರೀ ವಿಜಯ ಮಹಾಂತೇಶ ಕಾಲೇಜು, ಇಳಕಲ್ (ಬಾಗಲಕೋಟೆ) ಮುಸ್ಲಿಂ ಹುಡುಗಿಯರನ್ನು ಕಾಲೇಜಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ಕಾಲೇಜುಗಳ ಪಟ್ಟಿಗಳಿಗೆ ಸೇರಿವೆ.