ಬೆಂಗಳೂರು: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಸಿಡಿ ಪ್ರಕರಣ ಸಂಬಂಧ ಸರಕಾರ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ಎಸ್ಐಟಿ ಮುಖ್ಯಸ್ಥರ ಸಹಿಯೇ ಇಲ್ಲದಿರುವುದನ್ನ ಪರಿಗಣಿಸಿದ ನ್ಯಾಯಾಲಯವು ವರದಿಯನ್ನ ಪರಿಗಣಿಸಲು ನಿರಾಕರಿಸಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಮತ್ತು ನ್ಯಾಯಮೂರ್ತಿ ಸೂರಜ್ ಗೋಂವಿದರಾಜ್ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಮುಖ್ಯಸ್ಥ ಸೌಮೇಂಧು ಮುಖರ್ಜಿ ಅವರ ಸಹಿ ಇಲ್ಲ. ಹೀಗಾಗಿ, ಎಸ್‌ಐಟಿ ಮುಖ್ಯಸ್ಥರು ಅಥವಾ ಉಸ್ತುವಾರಿ ಅಧಿಕಾರಿಯ ಸಹಿ ಒಳಗೊಂಡ ವರದಿಯನ್ನು ಜೂನ್ 17ರಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು “ಎಸ್‌ಐಟಿ ಮುಖ್ಯಸ್ಥರು ವೈದ್ಯಕೀಯ ರಜೆಯಲ್ಲಿದ್ದು, ಅವರ ಬದಲಿಗೆ ಅಪರಾಧ ವಿಭಾಗದ ಜಂಟಿ ಆಯುಕ್ತರು ವರದಿಗೆ ಸಹಿ ಮಾಡಲಿದ್ದಾರೆ” ಎಂದರು. ಇದಕ್ಕೆ ಒಪ್ಪದ ಪೀಠವು ಅಂಥ ಸನ್ನಿವೇಶದಲ್ಲಿ ಉಸ್ತುವಾರಿ ನೇಮಕಕ್ಕೆ ಸಂಬಂಧಪಟ್ಟಂತೆ ಅಗತ್ಯ ಆದೇಶ ಹೊರಡಿಸಬೇಕು. ಬಳಿಕ ಉಸ್ತುವಾರಿ ಅಧಿಕಾರಿ ಸಹಿ ಮಾಡಿದ ಸ್ಥಿತಿಗತಿ ವರದಿ ಸಲ್ಲಿಸಬಹುದು ಎಂದಿತು.
ಇನ್ನು ಲೈಂಗಿಕ ಸಿಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಮನವಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ಜೂನ್ 18ಕ್ಕೆ ಮುಂದೂಡಿದೆ..
ರಮೇಶ್ ಜಾರಕಿಹೊಳಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿವಿ ನಾಗೇಶ್ ಅವರು ಪಿಐಎಲ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಅರ್ಜಿ ನಿರ್ವಹಣೆಗೆ ಅರ್ಹವಲ್ಲ ಎಂದು ವಾದಿಸಿದರು. ಆಗ ಪೀಠವು ಪಿಐಎಲ್‌ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ತೆರನಾದ ತಕಾರುಗಳಿದ್ದರೆ ಜೂನ್ 17ರಂದು ಲಿಖಿತ ಆಕ್ಷೇಪಣೆ ಸಲ್ಲಿಸಬಹುದು ಎಂದಿತು.