ತಾರತಮ್ಯದ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಹಿಂಬಾಗಿಲ ಮೂಲಕ ತರುವ ಮೋದಿ ಸರಕಾರದ ಯಾವುದೇ ಪ್ರಯತ್ನವನ್ನು ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳು ಸೋಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಕರೆ ನೀಡಿದ್ದಾರೆ.
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರವು ಪ್ರಾರಂಭಿಸಿದಂತೆ ಕಂಡು ಬರುತ್ತಿದ್ದು, ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದ ಬಳಿಕ ಇದನ್ನು ತಡೆಹಿಡಿಯಲಾಗಿತ್ತು. ನೆರೆ ರಾಷ್ಟ್ರಗಳ ಮುಸ್ಲಿಮೇತರ ವಲಸಿಗರಿಂದ ಸರಕಾರವು ಈಗಾಗಲೇ ಪೌರತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಗುಜರಾತ್, ರಾಜಸ್ತಾನ, ಛತ್ತೀಸ್ ಗಢ್, ಹರ್ಯಾಣ ಮತ್ತು ಪಂಜಾಬ್ ನ 15 ಜಿಲ್ಲೆಗಳಲ್ಲಿ ಹಿಂದು, ಸಿಖ್ಖರು, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಂದ ಅರ್ಜಿ ಆಹ್ವಾನಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಸಂವಿಧಾನದ ತಳಹದಿಯನ್ನು ಪ್ರಶ್ನಿಸುವ ಬಹಿಷ್ಕಾರದ ಮತ್ತು ಕೋಮು ಆಧಾರಿತವಾಗಿ ವಿಭಜಿಸುವ ಕಾನೂನು ಅನುಷ್ಠಾನಗೊಳಿಸಲು ಸರಕಾರವು ಕೋವಿಡ್ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದೆ. ಪ್ರಸಕ್ತ ದೇಶವು ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಸಾಕಷ್ಟು ವೈದ್ಯಕೀಯ ಸೌಕರ್ಯಗಳಿಲ್ಲದೇ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಮೃತದೇಹಗಳ ವಿಲೇವಾರಿಯು ದೊಡ್ಡ ಸವಾಲಾಗಿದ್ದು, ಜನರು ಮೃತದೇಹಗಳನ್ನು ನದಿಗಳಿಗೆ ಎಸೆಯುತ್ತಿದ್ದಾರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದಹಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ನಾಗರಿಕರಿಗೆ ಲಸಿಕೆ ಖಾತರಿಪಡಿಸಲು ಕೇಂದ್ರವು ವಿಫಲವಾಗಿದೆ. ಆದರೂ ಅದು ಈ ದೇಶದ ಮುಸ್ಲಿಮರನ್ನು ದೂರ ಮಾಡುವ ಮತ್ತು ಜನರನ್ನು ಧಾರ್ಮಿಕವಾಗಿ ವಿಭಜಿಸುವ ಹಿಂದುತ್ವ ಫ್ಯಾಶಿಸ್ಟ್ ಅಜೆಂಡಾವನ್ನು ಮುಂದುವರಿಸುವುದರಲ್ಲಿ ಹಿಂದೆ ಸರಿದಿಲ್ಲ.
ಸಿಎಎಯನ್ನು ಅದರ ನಿಯಮಗಳಿಗೂ ಮೊದಲು ಅನುಷ್ಠಾನಗೊಳಿಸುವ ಪಿತೂರಿಯೂ ಸಿದ್ಧಗೊಂಡಿದೆ ಮತ್ತು ಇದರ ವಿರುದ್ಧ ದಾಖಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇನ್ನೂ ಪ್ರಾರಂಭಿಸಿಲ್ಲ. ಇದು ಒಂದು ರೀತಿಯಲ್ಲಿ ಹತಾಶೆಯ ಕ್ರಮವಾಗಿದೆ. ವಿನಾಶಕಾರಿ ದುರಾಡಳಿತ, ಆರ್ಥಿಕ ಬಿಕ್ಕಟ್ಟು, ಕೋವಿಡ್ ನಿರ್ವಹಣೆಯಲ್ಲಿನ ದೊಡ್ಡ ಮಟ್ಟದ ವೈಫಲ್ಯದ ಬಗ್ಗೆ ಚಿಂತಿಸುವುದು ಮತ್ತು ಅದರ ಬಗ್ಗೆ ಪ್ರಶ್ನಿಸುವುದರಿಂದ ಜನರನ್ನು ತಡೆಯಲು ಮೋದಿ ಮತ್ತು ಶಾ ಜೋಡಿಯು ಒಂದು ಹೊಸ ವಿಷಯಕ್ಕಾಗಿ ಉತ್ಸುಕರಾಗಿದ್ದಾರೆ.
ಪೌರತ್ವ ಕಾಯ್ದೆ 1955 ಮತ್ತು ಪೌರತ್ವ ನಿಯಮಗಳು 2009ರಡಿಯಲ್ಲಿ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಪ್ರತಿಪಾದಿಸುತ್ತಿರುವುದು ಕೂಡ ನಿರಾಧಾರವಾಗಿದೆ. ವಾಸ್ತವದಲ್ಲಿ ಅಧಿಸೂಚನೆಯು ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ.
ತಾರತಮ್ಯದ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಹಿಂಬಾಗಿಲ ಮೂಲಕ ತರುವ ಮೋದಿ ಸರಕಾರದ ಯಾವುದೇ ಪ್ರಯತ್ನವನ್ನು ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳು ಪ್ರತಿರೋಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ.