ನವದೆಹಲಿ : ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದ ಕಠಿಣ ಕಾನೂನುಗಳಡಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದರೂ, ಅವರ ಬಿಡುಗಡೆಗೆ ಪೊಲೀಸರು ಇಂದು ಮೀನಾಮೇಷ ಎಣಿಸಿದ ಘಟನೆ ನಡೆದಿದೆ. ಈ ಸಂಬಂಧ ಕಾರ್ಕರ್ಡೂಮ ಕೋರ್ಟ್ ನಲ್ಲಿ ಇಂದು ದೊಡ್ಡ ಹೈಡ್ರಾಮವೇ ನಡೆದಿದೆ.
ವಿದ್ಯಾರ್ಥಿ ನಾಯಕರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್, ಆಸಿಫ್ ಇಕ್ಬಾಲ್ ತನ್ಹಾ ಮುಂತಾದವರಿಗೆ ನಿನ್ನೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಅವರಿಗೆ ಜಾಮೀನು ನೀಡಿದವರ ವಿಳಾಸಗಳನ್ನು ಪರಿಶೀಲಿಸಲು ವಿಳಂಬವಾಗುವುದರಿಂದ, ಅವರ ಬಿಡುಗಡೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಪೊಲೀಸರು ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು.
ವಿದ್ಯಾರ್ಥಿ ನಾಯಕರ ಬಿಡುಗಡೆ ವಿಳಂಬಗೊಳಿಸಲು, ಉದ್ದೇಶಪೂರ್ವಕವಾಗಿ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ನ್ಯಾಯವಾದಿಗಳು ಆಪಾದಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್, ಕಾರ್ಯಕರ್ತ ಗೌತಮ್ ಭಾನ್ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಹಲವು ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ಜಾಮೀನು ಭದ್ರತೆ ನೀಡಿದ್ದಾರೆ.
ವಿದ್ಯಾರ್ಥಿಗಳ ಬಿಡುಗಡೆ ಪ್ರಕ್ರಿಯೆ ವಿಳಂಬ ಮಾಡಲು ಪೊಲೀಸರು ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಜಾಮೀನಿನಲ್ಲಿ ಬಿಡುಗಡೆಯಾಗುವುದಕ್ಕೆ ಮುನ್ನಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಬಿಡುಗಡೆ ತಡೆಯುವ ಉದ್ದೇಶದಿಂದ ಪೊಲೀಸರು ಈ ರೀತಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.