ಮ್ಯೂನಿಚ್ : ಪೋರ್ಚುಗೀಸ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್ ನಲ್ಲಿ ಹಂಗೇರಿ ವಿರುದ್ಧದ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಕಾಕೋಲಾ ಬಾಟಲಿಯನ್ನು ದೂರ ಸರಿಸಿ ನೀರು ಕುಡಿಯಲು ಆದೇಶಿಸಿದ್ದರು.
ಟೇಬಲ್ ನಿಂದ ಕೋಲಾ ಬಾಟಲಿಗಳನ್ನು ತೆಗೆದ ನಂತರ ರೊನಾಲ್ಡೊ ಬಾಟಲಿ ನೀರನ್ನು ತೆಗೆದುಕೊಂಡು ಮಾಧ್ಯಮಗಳಿಗೆ ‘ನೀವು ಕುಡಿಯಬೇಕಾಗಿರುವುದು ಇದನ್ನೇ’ ಎಂದು ಹೇಳಿದ್ದರು. ಇದಾದ ನಂತರ ರೊನಾಲ್ಡೊ ಅವರನ್ನು ಮಾದರಿಯಾಗಿಸಿಕೊಂಡ ಫ್ರೆಂಚ್ ಆಟಗಾರ ಪಾಲ್ ಪೋಗ್ಬಾ, ಪ್ರಾಯೋಜಕರಿಗೆ ತಲೆನೋವಾಗಿದ್ದಾರೆ. ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿರುವ ಸುದ್ದಿಗೋಷ್ಠಿಯಲ್ಲಿ ಬಿಯರ್ ಬಾಟಲಿಯನ್ನು ದೂರ ಸರಿಸುವ ಮೂಲಕ ಬಹಿರಂಗವಾಗಿ ಬಹಿಷ್ಕಾರವನ್ನು ವ್ಯಕ್ತಪಡಿಸಿದ್ದಾರೆ.
ಜರ್ಮನಿ ವಿರುದ್ಧದ ಪಂದ್ಯದ ನಂತರ ನಡೆದ ಸುದ್ದಿ ಗೋಷ್ಟಿಯಲ್ಲಿ ಪೋಗ್ಬಾ ಟೇಬಲ್ ಮೇಲೆ ಇದ್ದ ‘ಹೀನೆಕೆನ್’ ಕಂಪನಿಯ ಬಿಯರ್ ಬಾಟಲಿಯನ್ನು ತೆಗೆದು ದೂರ ಸರಿಸಿ ಪ್ರಾಯೋಜಕರಿಗೆ ತಲೆನೋವಾಗಿದ್ದಾರೆ. ಹೈನೆಕೆನ್ ಕಂಪೆನಿಯು ಟೂರ್ನಿಯ ಮುಖ್ಯ ಪ್ರಾಯೋಜಕತ್ವದಲ್ಲಿ ಒಂದಾಗಿದೆ. ಇಸ್ಲಾಮ್ ಧರ್ಮ ಸ್ವೀಕರಿಸಿದ್ದ ಪೋಗ್ಬಾ ಈಗಾಗಲೇ ಮದ್ಯದ ಬ್ರಾಂಡ್ ಗಳನ್ನು ಉತ್ತೇಜಿಸುವ ಜಾಹೀರಾತಿನಿಂದ ದೂರ ಉಳಿದಿದ್ದರು.