ಬುಧವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನು ಕಂಡಿದೆ. ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್ ಸಿಬಿ ತಂಡ ಬ್ಯಾಟಿಂಗ್ ನಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಬೆಂಗಳೂರು ಪಡೆ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆರ್ ಸಿಬಿ ಟಾಪ್ ನಾಲ್ವರು ಬ್ಯಾಟರ್ ಗಳು ಗುಜರಾತ್ ವಿರುದ್ಧ ಅಬ್ಬರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (14), ವಿರಾಟ್ ಕೊಹ್ಲಿ (7), ಪಡಿಕ್ಕಲ್ (4), ರಜತ್ ಪಟಿದಾರ್ (12) ಅಲ್ಪಮೊತ್ತಕ್ಕೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಟಾಪ್ ಆರ್ಡರ್ ಫ್ಲಾಪ್ ಆದರೂ ತಂಡಕ್ಕೆ ಮಧ್ಯಮ ಕ್ರಮಾಂಕ ಆಸರೆ ಆಯ್ತು. ಲಿವಿಂಗ್ಸ್ಟೋನ್ (54) ಅರ್ಧಶತಕ ಸಿಡಿಸಿದರೆ, ಜಿತೇಶ್ ಶರ್ಮಾ (33), ಟಿಮ್ ಡೇವಿಡ್ (32) ಕೊನೆಯಲ್ಲಿ ರನ್ ಕಲೆಹಾಕಿ ತಂಡದ ಸ್ಕೋರ್ 160ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು.
ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣಗಳು
ಕಳೆದ 7 ಆವೃತ್ತಿಗಳಲ್ಲಿ ಆರ್ ಸಿಬಿ ತಂಡದ ಭಾಗವಾಗಿದ್ದ ಸಿರಾಜ್ ಈ ಬಾರಿ ಗುಜರಾತ್ ಪರ ಆಡುತ್ತಿದ್ದಾರೆ. ಅಲ್ಲದೆ ನಿನ್ನೆಯ ಪಂದ್ಯದಲ್ಲೂ ಭರ್ಜರಿ ಬೌಲಿಂಗ್ ಮಾಡಿದ ಸಿರಾಜ್ ಪ್ರಮುಖ ಮೂರು ವಿಕೆಟ್ ಪಡೆದು ಆರ್ ಸಿಬಿ ಬ್ಯಾಟಿಂಗ್ ಲೈನ್ಅಪ್ ಅನ್ನು ಕೆಡವಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಕೆಲೆಹಾಕುತ್ತಿದ್ದ ಲಿವಿಂಗ್ ಸ್ಟೋನ್ ವಿಕೆಟ್ ಉರುಳಿಸಿದ್ದು ಆರ್ಸಿಬಿ ಹಿನ್ನಡೆಗೆ ಕಾರಣವಾಯಿತು.
ಈ ಪಂದ್ಯದಲ್ಲಿ ಆರ್ ಸಿಬಿ ಸೋಲಿಗೆ ಟಾಸ್ ಕೂಡ ಕಾರಣವಾಗಿದೆ. ಚಿನ್ನಸ್ವಾಮಿಯಲ್ಲಿ ನಡೆದ ಈ ಋತುವಿನ ಮೊದಲ ಪಂದ್ಯವಾಗಿದ್ದರಿಂದ ಪಿಚ್ ಬಗ್ಗೆ ಅರಿಯಲು ಎರಡೂ ತಂಡಗಳಿಗೆ ಅನಿವಾರ್ಯವಾಗಿತ್ತು. ಆದರೆ ಆರ್ ಸಿಬಿಗೆ ಈ ಅವಕಾಶ ಸಿಗಲಿಲ್ಲ.
ಈ ಪಂದ್ಯದಲ್ಲಿ ಆರ್ ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್ ಪ್ಲೇನಲ್ಲೆ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಒಟ್ಟಾರೆ 42 ರನ್ಗಳಿಗೆ 4 ವಿಕೆಟ್ ಕೈಚೆಲ್ಲಿದ್ದು ಆರ್ ಸಿಬಿ ಸ್ಕೋರ್ ಕಾರ್ಡ್ ಮೇಲೆ ಪ್ರಭಾವ ಬೀರಿತು.
ಗುಜರಾತ್ ತಂಡದ ಗೆಲುವಿನ ರೂವಾರಿ ಆದ ಜಾಸ್ ಬಟ್ಲರ್ ವಿಕೆಟ್ ಪಡೆಯುವಲ್ಲಿ ಆರ್ಸಿಬಿ ಬೌಲರ್ ಗಳು ವಿಫಲವಾದರು. ಇದರ ಪರಿಣಾಮ ಬಟ್ಲರ್ 39 ಎಸೆತಗಳಲ್ಲಿ 73 ರನ್ ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿ ಆದರು.