ಗಾಳಿ, ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗೆ
ಮಂಗಳೂರು: ಬೇಸಿಗೆ ಬಿಸಿಲಿನಿಂದ ತತ್ತರಿಸಿ ದ.ಕ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಏಕಾಏಕಿ ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.
ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ.
ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರ ಕ್ಕೆ ಬೆಂಕಿ ಹೊತ್ತಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆ ನೀಡಿದ್ದ ಮುನ್ಸೂನೆ ನಿಜವಾಗಿದ್ದು, ಮಂಗಳೂರಿನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಜನ ಫುಲ್ ಖುಷ್ ಆಗಿದ್ದಾರೆ.
ತಾಪಮಾನಕ್ಕೆ ತಾಳಲಾಗದೇ ಸಿಟಿ ಜನರು ಎಸಿ, ಕೂಲರ್ ಮೊರೆ ಹೋಗಿದ್ದರು. ಇದೀಗ ವರುಣ ಆಗಮಿಸಿ ಮಂಗಳೂರಿನ ಜನಕ್ಕೆ ಕೊಂಚ ಕೂಲ್ ಕೂಲ್ ಮಾಡಿದ್ದಾನೆ.