Home ಟಾಪ್ ಸುದ್ದಿಗಳು ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಬೆಂಕಿ: 6 ಮಂದಿ ಸಾವು, 13 ಮಂದಿಗೆ ಗಾಯ

ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಬೆಂಕಿ: 6 ಮಂದಿ ಸಾವು, 13 ಮಂದಿಗೆ ಗಾಯ

 ಆಂಧ್ರಪ್ರದೇಶ: ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ, 6 ಮಂದಿ ಸಾವನ್ನಪ್ಪಿ 13 ಮಂದಿ ಗಾಯಗೊಂಡಿರುವ ದಾರುಣ ಘಟನೆ ಜಿಲ್ಲೆಯ ಮಾಸುನೂರು ವಲಯದ ಅಕ್ಕಿರೆಡ್ಡಿಗುಡೆಂನಲ್ಲಿ ಸಂಭವಿಸಿದೆ.

ಉದುರುಪತಿ ಕೃಷ್ಣಯ್ಯ, ಬಿ ಕಿರಣ್ ಕುಮಾರ್, ಕಾರು ರವಿ ದಾಸ್, ಮನೋಜ್ ಕುಮಾರ್, ಸುವಾಸ್ ರವಿ ದಾಸ್ ಮತ್ತು ಹಬ್ದಾಸ್ ರವಿ ದಾಸ್ ಮೃತಪಟ್ಟವರು.

ಅಕ್ಕಿರೆಡ್ಡಿಗುಡೆಂನ ಪೋರಸ್ ಎಂಬ ಹೆಸರಿನ ರಾಸಾಯನಿಕ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದು, ಮತ್ತೊಬ್ಬರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ನೂಜಿವೀಡು ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ.

ಮೃತಪಟ್ಟ 6 ಮಂದಿಯಲ್ಲಿ ನಾಲ್ವರು ಬಿಹಾರದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡಾಗ 18 ಮಂದಿ ಔಷಧಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ತೀವ್ರವಾದ ನಷ್ಟ ಉಂಟಾಗಿದೆ. ಬೆಂಕಿಯನ್ನು ಹತೋಟಿಗೆ ತರಲು ಎರಡು ಗಂಟೆ ಶ್ರಮಿಸಬೇಕಾಯಿತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ, ಅನಿಲ ಸೋರಿಕೆಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಗ್ನಿ ಅವಘಡ ಸಂಭವಿಸುವ ವೇಳೆ 150 ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ದೊರಕಿದೆ. ಅದೃಷ್ಟವಶಾತ್ ಸಾಕಷ್ಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಏಲೂರು ಎಸ್ ಪಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಢಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಫಾರ್ಮಾಸ್ಯುಟಿಕಲ್ಸ್ ತಯಾರಿಕೆಯಲ್ಲಿ ಬಳಸುವ ಪುಡಿಯನ್ನು ಪೋರಸ್ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಳುಗಳಿಗೆ 2ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

Join Whatsapp
Exit mobile version