ಮೈಸೂರು: ಬಿಜೆಪಿ ನೀಡಿರುವ ಸುಪಾರಿ ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಕುರಿತು ಸೃಷ್ಟಿಯಾಗಿರುವ ವಿವಾದ ಕುರಿತು ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ನಿರ್ಮಿಸಲು, ಹೂಡಿಕೆಗಳನ್ನು ಆಕರ್ಷಿಸಲು, ಉದ್ಯೋಗ ಸೃಷ್ಟಿಸಲು, ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ತಲಾ ಆದಾಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಕರೆದರೆ ಕುಮಾರಸ್ವಾಮಿಗೆ ಏನು ನಷ್ಟವಾಗುತ್ತದೆ? ಎಂದು ಪ್ರಶ್ನಿಸಿದರು.
ರಾಮನಗರದ ಕೇತಕನಹಳ್ಳಿಯಲ್ಲಿ ನೀವು ಜಾಗ ಖರೀದಿ ಮಾಡಿಕೊಂಡಿದ್ದು ಹೇಗೆ.? ದೇವಗಿರಿ ನಿಮ್ಮ ತೆಕ್ಕೆಗೆ ಹೇಗೆ ಬಂತು..? ನಿಮ್ಮ ವಂಶವೃಕ್ಷವನ್ನ ತಿಳಿಸುವೆ ಕೇಳಿ. ನಿಮ್ಮ 43 ಜನ ಸಂಬಂಧಿಕರ ಹೆಸರಿನಲ್ಲಿ ನೈಸ್ ವ್ಯಾಪ್ತಿಯಲ್ಲಿ ಬೇನಾಮಿ ಆಸ್ತಿ ಮಾಡಿದ್ದೀರಿ ಇದಕ್ಕೆ ಉತ್ತರ ಕೊಡಿ ಕುಮಾರಸ್ವಾಮಿ ಅವರೇ..?
ಪೆಂಡ್ರೈವ್ ಕಥೆ ಹೇಳಿದ್ದೀರಿ ಅದೆಲ್ಲೋಯ್ತು ನಿಮ್ಮ ಪೆನ್ ಡ್ರೈವ್ ಕಥೆ.? ನನ್ನ ಬಳಿಯೂ ಕೂಡ ಪೆಂಡ್ರೈವ್ ಇದೆ. ನೀವು ಬಿಟ್ಟ ಮರುದಿನವೇ ನಿಮ್ಮ ಪೆಂಡ್ರೈವ್ ನಾವು ಬಿಡುತ್ತೇನೆ. ಈಗ ನೀವು ಅದೆನೋ ಸರಕು ಇದೆ ಅಂತೀರಾ ಅದನ್ನಾದರೂ ಬಿಡ್ರೀ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಟಾಂಗ್ ಕೊಟ್ಟರು.