Home ಕರಾವಳಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ನಿಶ್ಚಿತ: ಮಾಧವ ಗೌಡ ಭವಿಷ್ಯ

ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ನಿಶ್ಚಿತ: ಮಾಧವ ಗೌಡ ಭವಿಷ್ಯ

ಮಂಗಳೂರು: ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಯ ಪೂರ್ವ ತಯಾರಿಯಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳ-ಜೆಡಿಎಸ್ ಪ್ರಚಾರ ಜಾಥಾಕ್ಕೆ ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಪಕ್ಷದ ಜಿಲ್ಲಾ  ಅಧ್ಯಕ್ಷರಾದ ಜಾಕೆ ಮಾಧವ ಗೌಡ ಸೋಮವಾರ ಚಾಲನೆ ನೀಡಿದರು.

 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದು, ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವನಿರ್ಮಾಣದ ಕಲ್ಪನೆಯಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ದೊರಕುತ್ತಿದೆ ಎಂದು ಹೇಳಿದ ಮಾಧವ ಗೌಡ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿ ಸುಮತಿ ಹೆಗ್ಡೆ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಸುಮತಿ ಹೆಗ್ಡೆ ಮಾತನಾಡಿ, ಕುಮಾರಸ್ವಾಮಿಯ ಸೂಚನೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ವಿಧಾನಸಭಾ ಕ್ಷೇತ್ರದ 38 ವಾರ್ಡ್’ಗಳಲ್ಲಿ ಪ್ರಚಾರ ಜಾಥಾ ಸಂಚರಿಸಲಿದೆ. ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮಾತನಾಡಿ, ಬಿಜೆಪಿ ಜನರಲ್ಲಿ ಭಯ, ಭೀತಿ, ದ್ವೇಷ ಹುಟ್ಟಿಸುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಬಿಜೆಪಿ ಸರ್ಕಾರ ಬೆಲೆ ನಿಯಂತ್ರಣ ಮಾಡಲು ಸಂಪೂರ್ಣ ವಿಫಲವಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಅಧಿಕಾರ ಪಡೆದ ರೀತಿಯಲ್ಲಿ ತಿರುಕನ ಕನಸು ಕಾಣುತ್ತಿದ್ದು, ಅಲ್ಲಿನ ಮುಖಂಡರು ಮುಖ್ಯಮಂತ್ರಿ ಹುದ್ದೆಗಿಟ್ಟಿಸಿಕೊಳ್ಳುವ ಪೈಪೋಟಿಯಲ್ಲಿದ್ದಾರೆ. ಆದರೆ ಜೆಡಿಎಸ್ ಪಕ್ಷ ಜನ ಸಾಮಾನ್ಯರ ಕಷ್ಟ ಅರಿತುಕೊಳ್ಳಲು ಪಂಚ ರತ್ನ ಯೋಜನೆ ಮೂಲಕ ಜನರ ಜೊತೆಯಲ್ಲಿ ಸೇರಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಝಮೀರ್ ಷಾ, ಇಕ್ಬಾಲ್ ಮುಲ್ಕಿ. ದಿನಕರ್ ಉಳ್ಳಾಲ್, ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್, ಯುವನಾಯಕ ಪೈಜಾಲ್ ಮುಂತಾದವರು ಮಾತನಾಡಿದರು.

ಕನಕದಾಸ ಕುಳೂರ್, ಮುನೀರ್ ಮುಕ್ಕಚ್ಚೇರಿ, ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ, ರವೀಂದ್ರ ಉಳ್ಳಾಲ. ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್, ಪ್ರಿಯಾ ಸಾಲಿಯಾನ್, ಶ್ರೀಮಣಿ. ಕವೀತಾ ಜೋಹರ್, ಬಶೀರ್ ಬೇಗಂ, ಲತೀಫ್ ವಳಚ್ಚಿಲ್, ಎಚ್.ಕೆ.ಚಂದ್ರಶೇಖರ್, ಸುಮೀತ್ ಸುವರ್ಣ, ನಾಸಿರ್ ಬೆಂಗ್ರೆ, ರಾಶ್ ಬ್ಯಾರಿ, ನೀಲಂ, ಬಸವರಾಜ್, ಮನೋಜ್, ಜಾವೇದ್ ನಝೀರ್, ಯುವ ಜನತಾದಳ ವಿಧ್ಯಾರ್ಥಿ ಅಧ್ಯಕ್ಷ ಬಿಲಾಲ್ ಮುಹಮ್ಮದ್ ಉಪಸ್ಥಿತರಿದ್ದರು. ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version