ಬೆಂಗಳೂರು: ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಡಿಕೆ ಸುರೇಶ್ ವಿರುದ್ಧ ಆಕ್ರೋಶ ಹೊರಹಾಕುವ ಭರದಲ್ಲಿ ಬಿಜೆಪಿ ಹಿರಿಯ ನಾಯಕರ ಕೆಎಸ್ ಈಶ್ವರಪ್ಪ ಅವರು, ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ರೀತಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದರು.
ಕೆ.ಎಸ್.ಈಶ್ವರಪ್ಪ ವಿರುದ್ಧದ ಎಫ್ ಐಆರ್ ಗೆ ತಡೆ ನೀಡಿದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಧುರೀಣರು ಉತ್ತಮ ಭಾಷೆ ಯಾಕೆ ಬಳಸುತ್ತಿಲ್ಲ? ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ ಪ್ರತಿಬಿಂಬಿಸುವುದಿಲ್ಲ? ಹೀಗೆ ಮಾತನಾಡಿ ಭಾಷೆ ಮೇಲೆ ದೌರ್ಜನ್ಯ ಯಾಕೆ ಎಸಗುತ್ತಾರೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ವಿವಿಧ ಸಿದ್ಧಾಂತದ ಜನರನ್ನು ಹೊಂದಿರುವ ರಾಜ್ಯವಾಗಿದ್ದು, ಭಾಷೆಯ ಬಳಕೆಯ ಬಗ್ಗೆ ರಾಜಕಾರಣಿಗಳು ಎಚ್ಚರ ವಹಿಸಬೇಕು. ಶಾಲೆ ಮಕ್ಕಳು ನಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವಿರಬೇಕು ಎಂದು ಏಕಸದಸ್ಯ ಪೀಠ ಹೇಳಿದೆ.