ಹೈಕೋರ್ಟ್ ಆದೇಶ: ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ ಬಿಡದಿ ತೋಟದ ಮನೆ ಸುತ್ತ ಒತ್ತುವರಿ ತೆರವಿಗೆ ಸಿದ್ಧತೆ

- Advertisement -

ಬೆಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ವಿರುದ್ಧ ಈ ಹಿಂದೆ ರಾಮನಗರದ ಬಿಡದಿಯಲ್ಲಿ ಭೂ ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಆದೇಶದ ಪ್ರಕಾರ ಕಂದಾಯ ಇಲಾಖೆ ಈಗ ಒತ್ತುವರಿ ಕಾರ್ಯಾಚರಣೆಗೆ ಮುಂದಾಗಿದೆ.

- Advertisement -

ಕಂದಾಯ ಇಲಾಖೆ ಒತ್ತುವರಿ ತೆರೆವು ಕಾರ್ಯಾಚರಣೆಗೆ ಮುಂದಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕೆಲವು ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣ ಇದಾಗಿದೆ.

ಪ್ರಕರಣ ಸಂಬಂಧ ಕಂದಾಯ ಇಲಾಖೆ ಎಸ್​ಐಟಿ ರಚನೆ ಮಾಡಿಕೊಂಡಿತ್ತು ಬಿಡದಿಯ ಕೇತಗಾನಹಳ್ಳಿಯ ಸರ್ವೆ ನಂಬರ್ 7,8,9,10,16,17 ಮತ್ತು 79ರಲ್ಲಿ ಭೂ ಒತ್ತುವರಿಯಾಗಿದೆ ಎಂದು ಆರೋಪ ಕೇಳಿ ಬಂದಿತ್ತು.

- Advertisement -

14 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ವಿಚಾರದಲ್ಲಿ ತೆರವು ಕಾರ್ಯಾಚರಣೆ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು.

ಈ ಹಿನ್ನೆಲೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಇಂದು ಒತ್ತುವರಿ ಭೂಮಿಯ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ. ಹೆಚ್​​.ಡಿ ಕುಮಾರಸ್ವಾಮಿಯವರ ತೋಟದ ಮನೆಯ ಸುತ್ತಮುತ್ತಲಿನ ಒತ್ತುವರಿ ಜಾಗದ ತೆರವಿಗೆ ಸಿದ್ಧತೆಮಾಡಿಕೊಳ್ಳಲಾಗಿದೆ. ಈಗಾಗಲೇ ಹೆಚ್​ಡಿಕೆ ತೋಟದ ಮನೆಯ ಮುಂದೆ ಎರಡು ಜೆಸಿಬಿಗಳು ಬಂದು ನಿಂತಿವೆ.

ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕುಮಾರಸ್ವಾಮಿ ಪತ್ರದಲ್ಲಿ ಏನಿದೆ?
“ರಾಮನಗರ ತಾಲೂಕು ಬಿಡದಿ ಹೋಬಳಿಯ ಕೀತಿಗಾನಹಳ್ಳಿ ಗ್ರಾಮದ ಸರ್ವೇ ನಂ. 7,8,9,10,16,17 ಮತ್ತು 79ರಲ್ಲಿ ಭೂ ಒತ್ತುವರಿ ಆಗಿದ್ದರೆ ಸರ್ವೇ ನಡೆಸಿ ವರದಿ ನೀಡುವಂತೆ ರಾಜ್ಯ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿಯಷ್ಟೇ.ಘನ ನ್ಯಾಯಾಲಯದ ಸೂಚನೆಯಂತೆ ತಮ್ಮ ಸಮೀಕ್ಷಾ ತಂಡ ದಿನಾಂಕ 18-02-2025ರ ಮಂಗಳವಾರ ಮೇಲ್ಕಂಡ ಎಲ್ಲಾ ಸರ್ವೇ ನಂ.ಗಳು ಸೇರಿದಂತೆ ನಾನು ಅನುಭವದಲ್ಲಿರುವ ಸರ್ವೇ ನಂ. 7-8ರಲ್ಲಿಯೂ ಸರ್ವೇ ನಡೆಸಲಾಗಿದೆ. ಸರ್ವೇ ನಂ.7-8ರಲ್ಲಿ ಮಾತ್ರ ನಾನು ಪಹಣಿ ದಾಖಲೆ ಹೊಂದಿದ್ದು, ಸರ್ವೇ ನಂ.7ರಲ್ಲಿ 5.20 ಎ/ಗುಂಟೆ ಜಮೀನನ್ನು ಕೇತಿಗಾನಹಳ್ಳಿ ಗ್ರಾಮದ ಕಂವೀರಯ್ಯ, ದೇವರಾಜು, ದೊಡ್ಡಯ್ಯ, ಸಾವಿತ್ರಮ್ಮ ಕೋಮ್ ಹನುಮೇಗೌಡ, ದೇವರಾಜು ಅವರಿಂದ ಖರೀದಿ ಮಾಡಿದ್ದು, ಆ ಪೈಕಿ ಕೇವಲ 1.15 ಎ/ಗುಂಟೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ತಾವುಗಳು ಹುಡುಕಿಕೊಡಬೇಕಾಗಿ ವಿನಂತಿ ಮಾಡುತ್ತೇನೆ.

ಕೇತಿಗಾನಹಳ್ಳಿ ಗ್ರಾಮದ ಸರ್ವೇ ನಂ. 8ರಲ್ಲಿ ಗೇರುವಪ್ಪ ಬಿನ್ ಕವನಯ್ಯ ಹಾಗೂ ಇತರರು, ಸಾವಿತ್ರಮ್ಮ ಹನುಮೇಗೌಡ, ದೊಡ್ಡಯ್ಯ ಬಿನ್ ಕೆಂಚಪ್ಪ ಗಂಗಪ್ಪ ಬಿನ್ ಬಸಪ್ಪ, ಗೋವಿಂದಯ್ಯ ಅವರುಗಳಿಂದ 8.17 ಎ/ಗುಂಟೆ ಜಮೀನನ್ನು ಖರೀದಿ ಮಾಡಿರುತ್ತೇನೆ. ಪಹಣಿ ದಾಖಲೆ ಪ್ರಕಾರವೂ 8.17 ಎ/ಗುಂಟೆ ಜಮೀನು ನನ್ನ ಅನುಭವದಲ್ಲಿದ್ದು, ನನಗೆ ಆ ಜಮೀನಿನ ಹಕ್ಕು ಕ್ರಯ ಮತ್ತು ದಾನದ ಮೂಲಕ ದೊರೆತಿರುತ್ತದೆ. ಅಂದಿನಿಂದಲೂ ಸದರಿ ಜಮೀನಿನಲ್ಲಿ ಸ್ವತಃ ನಾನೇ ಅನುಭವದಲ್ಲಿರುತ್ತೇನೆ.ಇದಿಷ್ಟು ಜಮೀನನ್ನು ಮೀರಿ ಯಾವುದೇ ಹೆಚ್ಚುವರಿ ಜಮೀನು ಕಾನೂನುಬಾಹಿರವಾಗಿ ನನ್ನ ಅನುಭವದಲ್ಲಿದ್ದರೆ ಅದನ್ನು ನೀವು ಕಾನೂನು ಪ್ರಕಾರ ವಶಕ್ಕೆ ತೆಗೆದುಕೊಳ್ಳಬಹುದು” ಎಂದು ಪತ್ರ ಬರೆದಿದ್ದಾರೆ.

- Advertisement -


Must Read

Related Articles