Home ಟಾಪ್ ಸುದ್ದಿಗಳು ಮನೋರೋಗಿಗಳಿಗೆ ಶಾಕ್‌ ಟ್ರೀಟ್‌ಮೆಂಟ್: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

ಮನೋರೋಗಿಗಳಿಗೆ ಶಾಕ್‌ ಟ್ರೀಟ್‌ಮೆಂಟ್: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಖಿನ್ನತೆ, ಮದ್ಯದ ಚಟ, ದ್ವಂದ್ವ ಮನಸ್ಥಿತಿ, ಮನೋವ್ಯಾಧಿಯಿಂದ (ಸ್ಕಿಜೋಫ್ರೇನಿಯಾ) ಬಳಲುತ್ತಿರುವ, ಆತ್ಮಹತ್ಯೆ ಚಿಂತನೆಯಲ್ಲಿ ತೊಡಗಿರುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿರುವವರಿಗೆ ವಿದ್ಯುತ್‌ ಕಂಪನ ಚಿಕಿತ್ಸೆ (ಇಸಿಟಿ) ಅಥವಾ ಶಾಕ್‌ ಟ್ರೀಟ್‌ಮೆಂಟ್‌ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.


ಮನೋವಿಜ್ಞಾನಿ ಮತ್ತು ವಕೀಲ ಡಾ. ವಿನೋದ್‌ ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ಅವರಿದ್ದ ವಿಭಾಗೀಯ ಪೀಠವು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯನ್ನು (ನಿಮ್ಹಾನ್ಸ್‌) ಪ್ರಕರಣದಲ್ಲಿ ಪ್ರತಿವಾದಿಯಾಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು.


“ಇಸಿಟಿ ಜೀವ ಉಳಿಸುವ ಚಿಕಿತ್ಸೆ ವಿಧಾನವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಸಂಬಂಧ ತಜ್ಞರ ಸಮಿತಿ ಅಭಿಪ್ರಾಯ ನೀಡಬೇಕಿದೆ. ಈ ಸಂಬಂಧ ನಿಮ್ಹಾನ್ಸ್‌ ನಿರ್ದೇಶಕರಿಗೆ ಒಂದು ವಾರದಲ್ಲಿ ತಜ್ಞರ ಪ್ರತಿಕ್ರಿಯೆಯನ್ನು ಒಳಗೊಂಡ ಮಾಹಿತಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ” ಎಂದು ಪೀಠ ಹೇಳಿತು.


ಇದಕ್ಕೂ ಮುನ್ನ ವಕೀಲ ಕುಲಕರ್ಣಿ ಅವರು “ಮನೋ ಆರೋಗ್ಯ ಚಿಕಿತ್ಸೆ ಕಾಯಿದೆ (ಎಂಎಚ್‌ಸಿಎ) 2017ರ ಸೆಕ್ಷನ್‌ 94(3) ರಲ್ಲಿ ರೋಗಿಗಳಿಗೆ ಇಸಿಟಿ ನೀಡಬಾರದು ಎಂದು ಹೇಳುತ್ತದೆ. ಅದೇ ಕಾಯಿದೆಯ ಸೆಕ್ಷನ್‌ 94(1) (ಎ) ಪ್ರಕಾರ ರೋಗಿಯ ಜೀವ ಉಳಿಸಿಲು ಇಸಿಟಿ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಕಾನೂನಿನ ಎರಡು ನಿಯಮಗಳಲ್ಲಿ ವಿರೋಧಭಾಸವಿದ್ದು, ಸೆಕ್ಷನ್‌ 94(3) ವಜಾ ಮಾಡಬೇಕಿದೆ. ಖಿನ್ನತೆ, ಮದ್ಯದ ಚಟ, ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವವರಿಗೆ ಇಸಿಟಿ ನೀಡದಿದ್ದರೆ ಅವರು ಆತ್ಮಹತ್ಯಾಕಾರಿ ಚಿಂತನೆಗೆ ಮುಂದಾಗಬಹುದು. ಅಂತಿಮವಾಗಿ ಸಾವನ್ನಪ್ಪಬಹುದು. ಇಸಿಟಿ ಚಿಕಿತ್ಸೆಯನ್ನು ತುರ್ತು ಸಂದರ್ಭದಲ್ಲಿ ಮತ್ತು ರೋಗಿಯ ಆಯ್ಕೆಯನ್ನು ಆಧರಿಸಿ ನೀಡಿದರೆ ಅವರನ್ನು ಆತ್ಮಹತ್ಯೆ ಯೋಚನೆಗಳಿಂದ ಪಾರು ಮಾಡಬಹುದು” ಎಂದರು.


ಆಗ ಪೀಠವು “ಇಸಿಟಿ ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ತಜ್ಞರ ಸಮಿತಿಯಿಂದ ಮಾಹಿತಿ ಪಡೆಯಬೇಕಾಗುತ್ತದೆ” ಎಂದಿತು. ಇದಕ್ಕೆ ಕುಲಕರ್ಣಿ ಅವರು “ಮಾನಸಿಕ ಆರೋಗ್ಯದ ಬಗ್ಗೆ ತಿಳಿದಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನಾಯಮೂರ್ತಿ ನೇತೃತ್ವದಲ್ಲಿ ನಿಮ್ಹಾನ್ಸ್ ನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರು, ಚಂಡೀಗಢದ ಪಿಜಿಐ, ದೆಹಲಿಯ ಮತ್ತು ರಾಂಚಿಯ ಕೇಂದ್ರೀಯ ಮನೋವಿಜ್ಞಾನ ಸಂಸ್ಥೆಯ ತಜ್ಞರು, ರೋಗಿಗಳಿಗೆ ಚಿಕಿತ್ಸೆ ನೀಡಲು ಇಸಿಟಿಯನ್ನು ವ್ಯಾಪಕವಾಗಿ ಅನುಸರಿಸುವ ಖಾಸಗಿ ಮನೋವಿಜ್ಞಾನಿಯನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಬೇಕು” ಎಂದೂ ಮನವಿಯಲ್ಲಿ ಕೋರಿರುವುದಾಗಿ ಪೀಠದ ಗಮನಸೆಳೆದರು.


ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಬಿ ಜಿ ನಯನತಾರಾ ಅವರು “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂಬಂಧಪಟ್ಟ ಇಲಾಖೆಯಾಗಿದೆ. ಇದರ ಪರವಾಗಿ ನೋಟಿಸ್‌ ಪಡೆಯುತ್ತೇನೆ” ಎಂದರು. ಕೇಂದ್ರ ಕಾನೂನು ಇಲಾಖೆಯನ್ನು ಪ್ರತಿವಾದಿಯಾಗಿಸಿದ್ದಕ್ಕೆ ಆಕ್ಷೇಪಿಸಿದ ಪೀಠವು “ನಿರ್ದಿಷ್ಟ ವಿಷಯದ ಕುರಿತು ಕಾನೂನು ರೂಪಿಸುವಂತೆ ಸಂಸತ್‌ಗೆ ನಿರ್ದೇಶಿಸುವ ಅಧಿಕಾರವಿಲ್ಲ”. ನಿಮ್ಹಾನ್ಸ್‌ ಅನ್ನು ಪ್ರತಿವಾದಿಯಾಗಿಸುವ ಸಂಬಂಧ ಆದೇಶ ಹೊರಡಿಸಲಾಗುವುದು” ಎಂದು ಹೇಳಿತು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಲಾಗಿದೆ.


ಮನೋವಿಜ್ಞಾನಿ ವಕೀಲರಾಗಿದ್ದು ಹೇಗೆ?
ಇದಕ್ಕೂ ಮುನ್ನ, ಅರ್ಜಿದಾರ ಡಾ. ವಿನೋದ್‌ ಕುಲಕರ್ಣಿ ಅವರು ಮನೋವಿಜ್ಞಾನಿ ಹಾಗೂ ವಕೀಲ ಎಂಬ ವಿಚಾರವು ಕೆಲವು ಆಶ್ಚರ್ಯಕರ ವಿಚಾರಗಳ ಹಂಚಿಕೆಗೆ ವೇದಿಕೆ ಒದಗಿಸಿತು. ಕುಲಕರ್ಣಿ ಅವರ ಬಗ್ಗೆ ಅರಿತ ನ್ಯಾ. ಶರ್ಮಾ ಅವರು “ಈ ವಿಚಾರವನ್ನು (ಮನೋವಿಜ್ಞಾನಿ ವಕೀಲರೂ ಆಗಿರುವುದು) ಮೊದಲ ಬಾರಿಗೆ ನಾನು ಕೇಳುತ್ತಿದ್ದೇನೆ. ಇದೊಂದು ಡೆಡ್ಲಿ ಕಾಂಬಿನೇಷನ್‌. ಮನೋವಿಜ್ಞಾನಿಯಂಥ ಮಹತ್ವದ ಕೆಲಸವನ್ನು ಮಾಡುತ್ತಿದ್ದರೂ ವಕೀಲರಾಬೇಕು ಎಂದೆನಿಸಿದ್ದು ಏಕೆ?” ಎಂದರು.
ಆಗ ಕುಲಕರ್ಣಿ ಅವರು “ನನ್ನ ತಂದೆಯವರು ಜಿಲ್ಲಾ ನ್ಯಾಯಾಧೀಶರಾಗಿದ್ದರು. ಹೀಗಾಗಿ, ಚಿಕ್ಕಂದಿನಿಂದಲೂ ಕಾನೂನಿನ ಬಗ್ಗೆ ನನಗೆ ಒಲವಿತ್ತು” ಎಂದರು.


ಆಗ ಪೀಠವು “ಮನೋರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವುದು ನಿಮ್ಮ ಆಸಕ್ತಿ ಆಗಬೇಕು?” ಎಲ್ಲವೇ ಎಂದಿತು. ಇದಕ್ಕೆ ಕುಲಕರ್ಣಿ ಅವರು “ವೈದ್ಯನಾಗಿಯೂ ಕೆಲಸ ಮಾಡುತ್ತಿದ್ದೇನೆ. ನಿರ್ದಿಷ್ಟವಾಗಿ ಪ್ರಕರಣಗಳನ್ನು ನಡೆಸುವುದಿಲ್ಲ. ಸಾರ್ವಜನಿಕರವನ್ನು ಬಾಧಿಸುವ ಪ್ರಮುಖ ಪ್ರಕರಣಗಳನ್ನಷ್ಟೇ ನಡೆಸುತ್ತೇನೆ. ಹಿಂದೆಯೂ ಹಲವು ಪಿಐಎಲ್‌ ಹಾಕಿದ್ದೇನೆ” ಎಂದರು.
ಆಗ ಪೀಠವು “ನೀವು ಎಲ್ಲಿ ಶಿಕ್ಷಣ ಪೂರೈಸಿದ್ದೀರಿ” ಎಂದಿತು. ಬಳ್ಳಾರಿ ಮತ್ತು ಬಾಂಬೆಯ ಕೆಇಎಂ ಆಸ್ಪತ್ರೆಯಲ್ಲಿ ಡಿಇಎಂ ಪದವಿ ಪಡೆದಿರುವುದಾಗಿ ತಿಳಿಸಿದರು.
(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version