ನವದೆಹಲಿ: 2018ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ 10 ಲಕ್ಷ ರೂ. ಠೇವಣಿ ಇಡಲು ವಿಫಲವಾದ ನಂತರ ದೆಹಲಿ ಹೈಕೋರ್ಟ್ ಕತಾರ್ ಮೂಲದ ಅಲ್ ಜಝೀರಾ ಸುದ್ದಿ ಸಂಸ್ಥೆಗೆ ಹೊಸ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸುಬ್ರಮಣಿಯಂ ಪ್ರಸಾದ್ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
2018ರ ಏಪ್ರಿಲ್’ನಲ್ಲಿ, ಕಥುವಾ ಅತ್ಯಾಚಾರ ಪ್ರಕರಣದ ಪ್ರಸಾರವನ್ನು ಮಾಧ್ಯಮಗಳು ವರದಿ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು. ಅಪ್ರಾಪ್ತ ವಯಸ್ಕರ ಗುರುತನ್ನು ರಕ್ಷಿಸಲು ಕರೆ ನೀಡುವ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎನ್’ಡಿಟಿವಿ, ಸಿಎನ್’ಎನ್-ನ್ಯೂಸ್ 18, ಟೈಮ್ಸ್ ಆಫ್ ಇಂಡಿಯಾ, ಅಲ್ ಜಝೀರಾ ಮತ್ತು ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಸುಮಾರು ಎರಡು ಡಜನ್ ಮಾಧ್ಯಮ ಕಂಪನಿಗಳಿಗೆ ತಲಾ 10 ಲಕ್ಷ ರೂ.ಠೇವಣಿ ಇಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಮೊತ್ತವನ್ನು ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರ್ಗಾಯಿಸಿ, ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಸಂತ್ರಸ್ತರು ಮತ್ತು ಮೃತರ ಕುಟುಂಬಗಳಿಗೆ ವಿತರಿಸಬೇಕಾಗಿತ್ತು. ಬಹುತೇಕ ಎಲ್ಲಾ ಸುದ್ದಿ ಸಂಸ್ಥೆಗಳು ಈ ಮೊತ್ತವನ್ನು ಪಾವತಿಸಿವೆ.
2018ರಿಂದ ಹೈಕೋರ್ಟ್ ಅಲ್ ಜಝೀರಾಗೆ ಕನಿಷ್ಠ ನಾಲ್ಕು ನೋಟಿಸ್’ಗಳನ್ನು ನೀಡಿದೆ. ಆದರೆ ಅಲ್ ಜಝೀರಾ ಇದುವರೆಗೂ ಹಣವನ್ನು ಪಾವತಿಸದಿರುವುದಲ್ಲದೆ, ನ್ಯಾಯಾಲಯದ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ.