Home ಟಾಪ್ ಸುದ್ದಿಗಳು ದ್ವೇಷವೇ ಬಿಜೆಪಿ, RSS ವಿಚಾರಧಾರೆ; ಇವುಗಳಿಂದ ದೇಶ ವಿಭಜನೆಯ ಅಪಾಯ: ರಾಹುಲ್ ಗಾಂಧಿ ಎಚ್ಚರಿಕೆ

ದ್ವೇಷವೇ ಬಿಜೆಪಿ, RSS ವಿಚಾರಧಾರೆ; ಇವುಗಳಿಂದ ದೇಶ ವಿಭಜನೆಯ ಅಪಾಯ: ರಾಹುಲ್ ಗಾಂಧಿ ಎಚ್ಚರಿಕೆ

 ಬಳ್ಳಾರಿ: ಬಿಜೆಪಿ, ಆರ್ ಎಸ್ ಎಸ್ ವಿಚಾರಧಾರೆಯೇ ದ್ವೇಷ ಮತ್ತು ಹಿಂಸಾಚಾರ. ಇವುಗಳಿಂದ ದೇಶ ವಿಭಜನೆಯಾಗುವ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ತಲುಪಿದಾಗ ಶನಿವಾರ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ಕಳೆದ ಕೆಲವು ದಿನಗಳಿಂದ ಭಾರತ ಜೋಡೋ ಯಾತ್ರೆ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಸಾಗುತ್ತಿದ್ದೇವೆ. 3500 ಕಿ.ಮೀ ಪ್ರಯಾಣ ಇದಾಗಿದ್ದು, ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ ಮಾರ್ಗವಾಗಿ, ಕರ್ನಾಟಕಕ್ಕೆ ತಲುಪಿದೆ. ಆರಂಭದಲ್ಲಿ 3500 ಕಿ.ಮೀ ಸಾಗುವುದು ಸುಲಭದ ಕೆಲಸವಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಪ್ರಯಾಣ ಆರಂಭಿಸಿ ದಿನ ಕಳೆದಂತೆ ನಂತರ ಹೆಜ್ಜೆ ಹಾಕುವುದು ಸುಲಭವಾಯಿತು ಎಂದರು.

ಈ ಯಾತ್ರೆಯಲ್ಲಿ ನಾವು ಬಳಲಿದಾಗ ಯಾವುದಾದರೂ ಒಂದು ಶಕ್ತಿ ನಮಗೆ ಪ್ರೇರಣೆ ನೀಡಿ ಮುಂದೆ ಸಾಗುವಂತೆ ಮಾಡಿತ್ತು. ಸಣ್ಣ ಮಕ್ಕಳು, ವಿಕಲಚೇತನರು, ವೃದ್ಧರು, ಬಡವರ ಮಾತುಗಳಿಂದ ನಮಗೆ ಪ್ರೇರಣೆ ನೀಡುತ್ತಿತ್ತು. ಈ ಯಾತ್ರೆ ನಾವು ಯಾಕೆ ಪ್ರಾರಂಭಿಸಿದ್ದೇವೆ? ಇದರ ಉದ್ದೇಶವೇನು? ಇದರಿಂದ ನಮಗೆ ನೆರವು ಯಾಕೆ ಸಿಗುತ್ತಿದೆ? ನಮಗೆ ಪ್ರೇರಣೆ ನೀಡುತ್ತಿರುವ ಶಕ್ತಿ ಯಾರಿಂದ ಸಿಗುತ್ತಿದೆ? ಯಾಕೆ ಸಿಗುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ ಎಂದು ಹೇಳಿದರು.

ಈ ಯಾತ್ರೆಗೆ ನಾವು ಭಾರತ ಜೋಡೋ ಯಾತ್ರೆ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ, ಆರ್ ಎಸ್ ಎಸ್ ವಿಚಾರಧಾರೆ ದ್ವೇಷ, ಹಿಂಸಾಚಾರದ ವಿಚಾರವಾಗಿದ್ದು ಇವುಗಳಿಂದ ದೇಶ ವಿಭಜನೆಯಾಗುತ್ತಿವೆ. ಹಿಂದೂಸ್ಥಾನದ ಮೇಲೆ ಇದೊಂದು ದಾಳಿ. ಇದು ದೇಶಭಕ್ತಿಯಲ್ಲ, ದೇಶ ವಿರೋಧಿ ಕೆಲಸವಾಗಿದೆ. ಕಳೆದೊಂದು ತಿಗಳಿಂದ ಯಾತ್ರೆ ಮಾಡುತ್ತಿದ್ದು, ಬೇರೆ ಬೇರೆ ಧರ್ಮ, ಜಾತಿ, ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ, ಕಾಣುತ್ತಿಲ್ಲ ಎಂದು ರಾಹುಲ್ ಹೇಳಿದರು.

ದಾರಿಯಲ್ಲಿ ಯಾರಾದರೂ ಬಿದ್ದರೆ ಉಳಿದ ಎಲ್ಲರೂ ಅವರಿಗೆ ಸಹಾಯ ಮಾಡುತ್ತಾರೆ. ಸಹಾಯ ಮಾಡುವಾಗ ಲಿಂಗ, ಜಾತಿ, ಧರ್ಮ, ಭಾಷೆಯನ್ನು ಹುಡುಕುವುದಿಲ್ಲ. ಈ ವಿಚಾರಧಾರೆ ಕೇವಲ ಯಾತ್ರೆಯ ವಿಚಾರಧಾರೆಯಲ್ಲ. ಇದು ಕರ್ನಾಟಕ ರಾಜ್ಯ ಹಾಗೂ ದೇಶದ ವಿಚಾರಧಾರೆಯಾಗಿದೆ ಎಂದು ರಾಹುಲ್ ವ್ಯಾಖ್ಯಾನಿಸಿದರು.

ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಇದೇ ವಿಚಾರಧಾರೆಯನ್ನು ನಮಗೆ ತಿಳಿಸಿದ್ದರು. ಅವರು ಹೇಳಿದ ಮಾತುಗಳು ಕರ್ನಾಟಕದಲ್ಲಿ ಹೆಜ್ಜೆ ಹಾಕುವಾಗ ಕಾಣಿಸಿದೆ. ಇದನ್ನು ಕನ್ನಡಿಗರ ರಕ್ತದಲ್ಲಿದ್ದು, ಇದನ್ನು ಕಸಿಯಲು ಸಾಧ್ಯವಿಲ್ಲ. ನಾವು ಸಹೋದರತ್ವದ ಜತೆಗೆ ಬೇರೆ ಉದ್ದೇಶವೂ ಇದೆ. ಈ ಯಾತ್ರೆಯಲ್ಲಿ ವಿದ್ಯಾರ್ಥಿಗಳು, ಯುವಕರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ನಾನು ಅವರಿಗೆ ಕೇಳಿದೆ ನೀವು ವ್ಯಾಸಂಗ ಮಾಡುತ್ತಿದ್ದು, ಮುಂದೆ ಏನು ಮಾಡುತ್ತೀರಿ ಎಂದು ಕೇಳಿದೆ. ಆಗ ಅವರು ಎಂಜಿನಿಯರ್, ವೈದ್ಯರು, ಪೊಲೀಸ್ ಇಲಾಖೆ ಸೇರುತ್ತೇನೆ ಎಂದರು. ನಂತರ ನಾನು ಅವರಿಗೆ ಮತ್ತೆ ಕೇಳಿದೆ. ನಿಮ್ಮ ವಿದ್ಯಾಭ್ಯಾಸ ಮುಗಿದ ನಂತರ ನಿಮಗೆ ಉದ್ಯೋಗ ಸಿಗುವ ವಿಶ್ವಾಸ ಇದೆಯಾ ಎಂದು ಕೇಳಿದೆ. ಆಗ ಅವರು ನಮಗೆ ಉದ್ಯೋಗ ಸಿಗುವ ನಂಬಿಕೆ ಇಲ್ಲ ಎಂದರು. ಇಂದು ದೇಶದಲ್ಲಿ 45 ವರ್ಷದ ಇತಿಹಾಸದಲ್ಲಿ ಗರಿಷ್ಠ ನಿರುದ್ಯೋಗ ಹೆಚ್ಚಾಗಿದೆ. ಪ್ರಧಾನಮಂತ್ರಿಗಳು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಎಲ್ಲಿ ಹೋದವು ಆ ಉದ್ಯೋಗಗಳು? ಬದಲಿಗೆ ಇದ್ದ ಉದ್ಯೋಗಗಳು ನಾಶವಾಗಿವೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇರುವುದೇಕೆ? ಪ್ರಧಾನಮಂತ್ರಿಗಳ ನೋಟು ರದ್ದತಿ, ಜಿಎಸ್ ಟಿ, ಕೋವಿಡ್ ಸಮಯದಲ್ಲಿನ ನೀತಿಯಿಂದ 12.5 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಹೇಳಿದರು.

ರಾಜ್ಯದಲ್ಲಿ ನೀವು ಪೊಲೀಸ್ ಇಲಾಖೆ ಸೇರಬೇಕಾದರೆ, 80 ಲಕ್ಷ ಲಂಚ ನೀಡಬೇಕು. ಹಣವಿದ್ದರೆ ಸರ್ಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರುತ್ತೀರಿ. ಸಹಕಾರಿ ಬ್ಯಾಂಕುಗಳಲ್ಲಿ, ಸಹಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಹಗರಣ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಬಿರುದು ನೀಡಲಾಗಿದೆ. ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು ಎಂದು ಅವರು ಆಪಾದಿಸಿದರು.

ಈ ಯಾತ್ರೆ ನಿರುದ್ಯೋಗ ವಿರುದ್ಧ ಧ್ವನಿ ಎತ್ತಲು ಆರಂಭಿಸಲಾಗಿದೆ. ನಿರುದ್ಯೋಗ, ದ್ವೇಷದ ಜತೆಗೆ ಬೆಲೆ ಏರಿಕೆ ಮೂಲಕ ನಿಮ್ಮ ಬದುಕು ದುಸ್ತರವಾಗಿದೆ. ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಇದು ನಿಲ್ಲುವುದಿಲ್ಲ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಭಾಷಣದಲ್ಲಿ ಅಡುಗೆ ಅನಿಲದ ಸಿಲಿಡಂರ್ 400 ರೂ. ಇದೆ. ಇದರಿಂದ ದೇಶದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಇಂದು ಅದೇ ಸಿಲಿಂಡರ್ 1000 ರೂ. ಆಗಿದೆ. ಈಗ ಪ್ರಧಾನಿಗಳು ನಮ್ಮ ಮಹಿಳೆಯರು ಏನು ಮಾಡಬೇಕು ಎಂದು ಹೇಳುತ್ತಿಲ್ಲ. ಇಂಧನ ತೈಲ ಬೆಲೆ ಆತಿಹಾಸಿಕ ಏರಿಕೆ ಆಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ಮಧ್ಯೆ ಸಿಕ್ಕಿ ನರಳುವಂತಾಗಿದೆ ಎಂದು ಹೇಳಿದರು.

ನನ್ನ ಯಾತ್ರೆಯಲ್ಲಿ ರೈತರನ್ನು ಭೇಟಿಯಾಗುತ್ತಿದ್ದು, ಎಲ್ಲ ರೈತರ ಪರಿಸ್ಥಿತಿ ಕೇಳುತ್ತಿದ್ದೇನೆ. ಅವರು ಕೃಷಿಗೆ ಎಷ್ಟು ಹಣ ಹಾಕುತ್ತಾರೆ, ಅದರಿಂದ ಎಷ್ಟು ಗಳಿಸುತ್ತಾರೆ ಎಂದು ಕೇಳುತ್ತೇನೆ. ಆಗ ಅವರು ಆರ್ಥಿಕ ಸಹಾಯ ವಿಲ್ಲದೆ ರೈತರು ಬದುಕಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ. ರೈತರಿಗೆ ನೆರವಾಗುವ ಬದಲು, ದೇಶದ ಇತಿಹಾಸದಲ್ಲಿ ರೈತ ಶೇ.5 ರಷ್ಟು ರಸಗೊಬ್ಬರಕ್ಕೆ, ಶೇ.12ರಷ್ಟು ಟ್ರ್ಯಾಕ್ಟರ್ ಗಳ ಮೇಲೆ, ಶೇ.18ರಷ್ಟು ತೆರಿಗೆಯನ್ನು ಕೀಟನಾಶಕಗಳಿಗೆ ನೀಡಬೇಕಿದೆ. ರೈತರು ತಮಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದಿದ್ದು, ಇದು ರಾಜ್ಯ ಹಾಗೂ ದೇಶದ ರೈತರು ಎದುರಿಸುತ್ತಿರುವ ಸಮಸ್ಯೆ ಎಂದು ರಾಹುಲ್ ಹೇಳಿದರು.

ಇನ್ನು ಈ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿರೋಧಿಯಾಗಿದೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಈ ವರ್ಗದ ಜನರ ಅಭಿವೃದ್ಧಿಗೆ ಸಿಗಬೇಕಿದ್ದ ಸುಮಾರು 8 ಸಾವಿರ ಕೋಟಿ ಹಣವನ್ನು ಬೇರೆ ಕಾರ್ಯಕ್ಕೆ ವರ್ಗಾಯಿಸಲಾಗಿದೆ.

ನಾವು ಅಧಿಕಾರದಲ್ಲಿದ್ದಾಗ ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದ್ದೇವೆ. ಆ ಸಮಿತಿಯು ಎಸ್ ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7.5ರಷ್ಟು ಏರಿಕೆ ಮಾಡಲು, ಎಸ್ ಸಿ ಸಮುದಾಯದ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಲು ಶಿಫಾರಸ್ಸು ನೀಡಿತ್ತು. ಬಿಜೆಪಿ ಸರ್ಕಾರ ಇದನ್ನು ಜಾರಿಗೊಳಿಸಿ ಅನುಷ್ಠಾನಕ್ಕೆ ತರಲು ಮೀನಾಮೇಷ ಎಣಿಸುತ್ತಿರುವುದೇಕೆ. ರಾಜ್ಯ ಸರ್ಕಾರ ಸಬೂಬು ಹೇಳುವುದನ್ನು ಬಿಟ್ಟು ಕೂಡಲೇ ಇದನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಟಿಕಲ್ 371 ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿತ್ತು. ವಾಜಪೇಯಿ ಹಾಗೂ ಅಡ್ವಾಣಿ ಅವರು ನಿರಾಕರಿಸಿದ್ದರು. ನಿಮ್ಮ ಸಂಕಷ್ಟ ಅರಿತು ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದ್ದೆವು. ಇದರ ಪರಿಣಾಮವಾಗಿ ಈ ಭಾಗದ ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಕ್ಕಿದ್ದು, ಸಾವಿರಾರು ಕೋಟಿ ವಿಶೇಷ ಅನುದಾನ ಸಿಕ್ಕಿದೆ. ಅಂತಿಮವಾಗಿ ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ತಾಯಿ ಸೋನಿಯಾ ಗಾಂಧಿ ಅವರು ಇಲ್ಲಿಂದ ಸ್ಪರ್ಧಿಸಿ ಇಲ್ಲಿನ ಜನರ ಬೆಂಬಲದೊಂದಿಗೆ, ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಗೆದ್ದು ಬಂದಿದ್ದರು. ನಾನಿದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ನನ್ನ ಜತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಳ್ಳಾರಿಯ ಬಿಸಿಲಿನ ಪ್ರಭಾವ ಅನುಭವಿಸಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು ಬೇಸಿಗೆ ಸಮಯದಲ್ಲಿ ಎಷ್ಟು ಸಮಸ್ಯೆ ಅನುಭವಿಸುತ್ತಾರೆ ಎಂದು ಅರಿತಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಮಗೆ ಎಲ್ಲ ರೀತಿಯ ನೆರವು ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,  ರಾಜಸ್ಥಾನ ಸಿಎಂ ಅಶೋಕ್ ಗೆಹಲೊಟ್, ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವರಾದ ಕೆ ಎಂ ಮುನಿಯಪ್ಪ, ಕೆ ರೆಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ,ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version