Home ಟಾಪ್ ಸುದ್ದಿಗಳು ಹಾಸನ: ಮಹಿಳೆ ಹತ್ಯೆ; ಮೂವರ ಸೆರೆ

ಹಾಸನ: ಮಹಿಳೆ ಹತ್ಯೆ; ಮೂವರ ಸೆರೆ

►ಆಭರಣದ ಆಸೆಗೆ ಸಂಬಂಧಿ, ಇತರ ಇಬ್ಬರಿಂದ ಕೃತ್ಯ: ಎಸ್ಪಿ

ಹಾಸನ: ನಗರದ ಪೆನ್‌ಶೆನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ್ಯುವೆಲ್ಲರಿ ಅಂಗಡಿ ಮಾಲೀಕನ ಪತ್ನಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಲತಃ ಚನ್ನರಾಯಪಟ್ಟಣ ತಾಲೂಕು ಕಬ್ಬಳಿ ಗ್ರಾಮ, ಹಾಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಾಸವಾಗಿರುವ ಸುನಿಲ್ ಕುಮಾರ್, ಬೆಂಗಳೂರು ಕಸ್ತೂರು ಬಡಾವಣೆಯ ಮುರುಳಿ, ರಾಮನಗರ ಜಿಲ್ಲೆ ದ್ಯಾವಸಂದ್ರ ಗ್ರಾಮದ ರಾಜು ಬಂಧಿತ ಆರೋಪಿಗಳು ಎಂದು ಎಸ್ಪಿ ಹರಿರಾಂ ಶಂಕರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಘಟನೆ ನಂತರ ಸಿಪಿಐ ರೇಣುಕಾಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳ್ಳತನವಾಗಿದ್ದ 522 ಗ್ರಾಂ ಚಿನ್ನಾಭರಣ ಪೈಕಿ 514 ಗ್ರಾಂ ಆಭರಣ ರಿಕವರಿ ಮಾಡಲಾಗಿದೆ. ಉಳಿದ ಚಿನ್ನವನ್ನು ಅಡಮಾನ ಇಟ್ಟಿದ್ದು, ಅದನ್ನೂ ಶೀಘ್ರ ರಿಕವರಿ ಮಾಡಲಾಗುವುದು ಎಂದರು.

ಬಂಧಿತರಲ್ಲಿ ಪ್ರಮುಖ ಆರೋಪಿ ಸುನಿಲ್‌ಕುಮಾರ್, ಕೊಲೆಯಾದ ಮಹಿಳೆ ಮಂಜುಳಾ ಅವರ ಹತ್ತಿರದ ಸಂಬಂಧಿಯಾಗಿದ್ದಾನೆ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ ಎಂದರು.

ಆರೋಪಿಗಳು ಕೃತ್ಯ ಎಸಗುವ ಮೂರು ದಿನ ಮುಂಚೆ ನಗರಕ್ಕೆ ಬಂದು ವಾಚ್ ಮಾಡಿದ್ದರು. ಮಂಜುಳಾ ಅವರ ಮನೆಯಲ್ಲಿ ಪ್ರತಿ ಶ್ರಾವಣಮಾಸದ ಮೊದಲ ದಿನ ಮನೆಯಲ್ಲಿ ಚಿನ್ನಾಭರಣ ಇಟ್ಟು ವಿಶೇಷ ಪೂಜೆ ಮಾಡುತ್ತಿದ್ದರು. ಇದು ಮೊದಲೇ ಗೊತ್ತಿದ್ದರಿಂದ ಜು. 27 ರಂದು ಮಧ್ಯಾಹ್ನ ಇಬ್ಬರು ಮನೆಗೆ ಬಂದಿದ್ದಾರೆ. ಪರಿಚಯ ಇದ್ದುದರಿಂದ ಮನೆ ಒಳ ಕರೆದು ಕಾಫಿ ಮಾಡಿಕೊಟ್ಟಿದ್ದಾರೆ. ಕಾಫಿ ಕುಡಿದವರೇ ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಲಾಕರ್ ಬಾಗಿಲು ತೆಗೆಸಿ ಚಿನ್ನಾಭರಣ ದೋಚಿದ ನಂತರ ಹತ್ಯೆಗೈದು ಪರಾರಿಯಾಗಿದ್ದರು. ಮತ್ತೊಬ್ಬ ಆರೋಪಿ ಹೊರಗೆ ನಿಂತು ಯಾರಾದರೂ ಬರುವ ಬಗ್ಗೆ ಕಾಯುತ್ತಿದ್ದ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಉದಯಭಾಸ್ಕರ್, ಸಿಪಿಐ ರೇಣುಕಾ ಪ್ರಸಾದ್ ಇದ್ದರು.

ಪೆನ್‌ಶೆನ್‌ಮೊಹಲ್ಲಾ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 5 ಮಂದಿಯನ್ನು ಬಂಧಿಸಿ 8 ಲಕ್ಷ ರೂ. ಮೌಲ್ಯದ 3 ಬೈಕ್, 58 ಗ್ರಾಂ ತೂಕದ ಚಿನ್ನಾಭರಣ, ಒಂದು ಲ್ಯಾಪ್‌ಟಾಪ್, ಒಂದು ರೆಡ್‌ಮಿ ಮೊಬೈಲ್ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು. ಹಾಸನ ನಗರದ ಸಾದಿಕ್‌ಪಾಷ, ಸೂರ್ಯ, ಲಿಖಿತ್, ಹೊಳೆನರಸೀಪುರದ ಶರತ್, ಅರಸೀಕೆರೆ ತಾಲೂಕಿನ ರವಿ ಬಂಧಿತ ಆರೋಪಿಗಳಾಗಿದ್ದು, ಅಭಿ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದರು.

Join Whatsapp
Exit mobile version