Home ಟಾಪ್ ಸುದ್ದಿಗಳು ಹಾಸನ: ಸರಣಿ ಅಪಘಾತ: ಕಾರು ಚಾಲಕ ಪರಾರಿ

ಹಾಸನ: ಸರಣಿ ಅಪಘಾತ: ಕಾರು ಚಾಲಕ ಪರಾರಿ

ಹಾಸನ: ಕಾರು ಚಾಲಕನ ಅಜಾಗರೂಕತೆಯಿಂದ ಬೂವನಹಳ್ಳಿ ಬಳಿಯ ಬುಸ್ತೇನಹಳ್ಳಿ ವೃತ್ತದಲ್ಲಿ ಇಂದು ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ.

ಮೊದಲು ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮಾಡುವ ಮಹಿಳೆಗೆ ಡಿಕ್ಕಿ ಹೊಡೆದಿರುವ ಕಾರು ಚಾಲಕ, ನಂತರ ಹಾಲಿನ ಕ್ಯಾನ್ ಸಾಗಿಸುತ್ತಿದ್ದ ಆಪೆ ಆಟೋಗೆ ಗುದ್ದಿದ್ದಾನೆ.

ಮುಂದೆ ಹೋಗಿ ಸಾರಿಗೆ ಬಸ್‌ಗೂ ಗುದ್ದಿದ್ದಾನೆ. ಮುಂದೆ ಹೋಗಿ ಕಾರು ಕೆಟ್ಟು ನಿಂತಿದೆ.

ಬೆಂಗಳೂರು ಮೂಲದ ಕಾರನ್ನು ಬಾಡಿಗೆ ಪಡೆದು ನಗರಕ್ಕೆ ಬಂದಿದ್ದ ವ್ಯಕ್ತಿ, ಈ ಅವಾಂತರಕ್ಕೆ ಕಾರಣನಾಗಿದ್ದಾನೆ. ಮುಖ ಮುಚ್ಚಿಕೊಂಡು ಮನಸೋ ಇಚ್ಛೆ ಕಾರು ಚಲಾಯಿಸಿದ್ದಾನೆ ಎನ್ನಲಾಗಿದೆ. ಒಂದಲ್ಲ, ಎರಡಲ್ಲ ಸರಣಿ ಡಿಕ್ಕಿ ಹೊಡೆದ ನಂತರ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಡಿಕ್ಕಿಯಲ್ಲಿ ಗಾಯಗೊಂಡಿರುವ ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನರಾಯಪಟ್ಟಣದಿಂದ ಹಾಸನಕ್ಕೆ ತರುತ್ತಿದ್ದ ಹಾಲು ಮಣ್ಣು ಪಾಲಾಗಿದೆ. ಹಾಸನದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗೂ ಭಾಗಶಃ ಹಾನಿಯಾಗಿದೆ. ಸರಣಿ ಡಿಕ್ಕಿ ಮಾಡಿದ ಕಾರಿಗೂ ಡ್ಯಾಮೇಜ್ ಆಗಿದೆ. ಆದರೆ ಈ ಕಾರಿನ ನಂಬರ್ ಪ್ಲೇಟ್ ಮುಚ್ಚಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಗುವಿನ ಆಧಾರ್ ಕಾರ್ಡ್ ಸಿಕ್ಕಿದ್ದು ಅದರಲ್ಲಿ ಮಗನ ಹೆಸರು ಭರತ್, ತಂದೆ ಹೆಸರು ರಾಜಾಚಾರ್ ಬೊಮ್ಮನಾಯಕನಹಳ್ಳಿ, ಹೊಸಕೊಪ್ಪಲು, ಹೆಚ್.ಎನ್. ಪುರ ರಸ್ತೆ ಎಂದು ಬರೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Join Whatsapp
Exit mobile version