Home ಟಾಪ್ ಸುದ್ದಿಗಳು ಹಾಸನ: ವಿವಿಧ ಇಲಾಖೆಗಳ ಮಹತ್ವಪೂರ್ಣ ಯೋಜನೆ; ಅಮೃತ್ ಸರೋವರಗಳಿಗೆ ಹೆಚ್ಚಿನ ಆದ್ಯತೆ

ಹಾಸನ: ವಿವಿಧ ಇಲಾಖೆಗಳ ಮಹತ್ವಪೂರ್ಣ ಯೋಜನೆ; ಅಮೃತ್ ಸರೋವರಗಳಿಗೆ ಹೆಚ್ಚಿನ ಆದ್ಯತೆ

ಹಾಸನ: ಜಿಲ್ಲಾದ್ಯಂತ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳು ಹಲವಾರು ಯೋಜನೆಗಳನ್ನು ಕೈಗೊಂಡು ಉತ್ತಮ ಕೆಲಸ ನಿರ್ವಹಿಸಿದ್ದು, ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಪುರುಷೋತ್ತಮ್‌ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಲ ಸಂರಕ್ಷಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಅಮೃತ್ ಸರೋವರ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅರಣ್ಯಕ್ಕೆ ಸಂಬಂಧಿಸಿದ ರಸ್ತೆ ಬದಿಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನೂ ನೆಟ್ಟು ಅರಣ್ಯ ಪ್ರಮಾಣವನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಮೂಲಗಳಾದ ಕೆರೆಗಳ ಸಂರಕ್ಷಣೆ, ಕಲ್ಯಾಣಿ ಪುನಶ್ಚೇತನಕ್ಕೆ ವಿಶೇಷ ಒತ್ತನ್ನು ನೀಡಲಾಗುತ್ತಿದ್ದು, ಇದರಿಂದ ಕೃಷಿಗೆ ಸಹಾಯವಾಗಲಿದೆ. ಅಮೃತ್ ಮಹೋತ್ಸವ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆರೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಜಲ ಶಕ್ತಿ ಅಭಿಯಾನದ ವಿಜ್ಞಾನಿ ಡಾ.ರಘುಚಂದ್ರ ಗರಿಮೆಲ್ಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್, ಉಪ ಕಾರ್ಯದರ್ಶಿಗಳಾದ ಡಾ. ಪುನೀತ್, ಡಾ.ಚಂದ್ರಶೇಖರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Join Whatsapp
Exit mobile version