ಹಾಸನ: ಕಳೆದ ಜೂನ್ ನಿಂದ ಆ.3 ರ ವರೆಗೂ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಒಟ್ಟು 1917.5 ಕಿಮೀ ರಸ್ತೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ. ಕೆ. ಗೋಪಾಲಯ್ಯ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದ ಪಂಚಾಯತ್ ರಾಜ್ ಇಲಾಖೆಯ 1311 ಕಿಮೀ ಹಾಗೂ ಲೋಕೋಪಯೋಗಿ ಇಲಾಖೆಯ 295 ಕಿಮೀ ರಸ್ತೆ ಹಾನಿಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಇಲ್ಲಿಯವರೆಗೂ 304 ಕಿಮೀ ಪಂಚಾಯತ್ ರಾಜ್ ಹಾಗೂ 7.5 ಕಿಮೀ ಲೋಕೋಪಯೋಗಿ ಇಲಾಖೆ ರಸ್ತೆ ಹಾಳಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆ ದುರಸ್ತಿಗಾಗಿ ಸರ್ಕಾರಕ್ಕೆ 195 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದೊಗೆ ಚರ್ಚಿಸಿ ತಕ್ಷಣ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಳೆದ ಮೂರ್ನಾಲ್ಕು ದಿನದಿಂದ ಅತಿ ಹೆಚ್ಚು ಮಳೆಯಾಗಿ ಅರಸೀಕೆರೆ, ಅರಕಲಗೂಡು, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಕೆರೆ ಕಟ್ಟೆಗಳು ತುಂಬಿ ಕೋಡಿ ಒಡೆದ ಪರಿಣಾಮ ಅಪಾರ ನಷ್ಟವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 24 ಸೇತುವೆ ಕುಸಿತಗೊಂಡಿವೆ. 23 ಕೆರೆಗಳಿಗೆ ಹಾನಿಯಾಗಿದೆ ಎಂದರು.
ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದ ಜಿಲ್ಲೆಯ 566 ಶಾಲಾ ಕೊಠಡಿ, ಹಾಗೂ ಆಗಸ್ಟ್ನಲ್ಲಿ ಇಲ್ಲಿಯವರೆಗೂ 29 ಕ್ಕಿಂತ ಹೆಚ್ಚು ಕೊಠಡಿ ಹಾನಿಯಾಗಿವೆ. ಅಲ್ಲದೆ 1300 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆ ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ವಿತರಿಸಿದ್ದಾರೆ. ಉಳಿದ ಪರಿಹಾರ ಹಣ ಬಿಡುಗಡೆಗೂ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಮಳೆ ಕಡಿಮೆಯಾಗುವವರೆಗೂ ಯಾವುದೇ ಅಧಿಕಾರಿಗಳು ರಜೆ ಹಾಕುವಂತಿಲ್ಲ. ಕೇಂದ್ರ ಸ್ಥಳದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಜಿಲ್ಲೆಗೆ 2200 ಮೆಟ್ರಿಕ್ ಟನ್ ಗೊಬ್ಬರ ಬಂದಿದೆ. ಇನ್ನೂ 10 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಅವಶ್ಯಕತೆ ಇದ್ದು, ಮುಂದಿನ ವಾರದೊಳಗೆ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ರಸಗೊಬ್ಬರವನ್ನು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡುವುದು ಹಾಗೂ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ.ಸಿಇಒ ಕಾಂತರಾಜ್ ಮತ್ತಿತರರು ಹಾಜರಿದ್ದರು.