Home ಟಾಪ್ ಸುದ್ದಿಗಳು ತಡೆಗೋಡೆ ಕುಸಿತ; ಭಾರೀ ಮಳೆಯಿಂದ ಅವಘಡ: ವಿಂಧ್ಯಗಿರಿ ಬೆಟ್ಟದಲ್ಲಿ ಆತಂಕ

ತಡೆಗೋಡೆ ಕುಸಿತ; ಭಾರೀ ಮಳೆಯಿಂದ ಅವಘಡ: ವಿಂಧ್ಯಗಿರಿ ಬೆಟ್ಟದಲ್ಲಿ ಆತಂಕ

ಶ್ರವಣಬೆಳಗೊಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಭಗವಾನ್ ಬಾಹುಬಲಿ ಸ್ವಾಮಿ ನೆಲೆಸಿರುವ ಶ್ರೀ ಕ್ಷೇತ್ರದ ವಿಂಧ್ಯಗಿರಿ ಬೆಟ್ಟದ ಹಳೆಯದಾದ ತಡೆಗೋಡೆ ಒಂದು ಭಾಗ ಕುಸಿದಿದೆ.

ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸೈಜು ಕಲ್ಲುಗಳಿಂದ ಕಟ್ಟಿದ್ದ ತಡೆಗೋಡೆ ಸುಮಾರು 20 ಮೀಟರ್ ಧರಾಶಾಹಿಯಾಗಿದೆ.

ನೂರಾರು ಕಲ್ಲುಗಳು ಬಂಡೆ ಮೇಲೆ ಜಾರಿದ ಪರಿಣಾಮ, ಹಲವು ಬಂಡೆಗಳೂ ಮೇಲಿಂದ ಕೆಳಗೆ ಜಾರಿವೆ. ಅದೃಷ್ಟವಶಾತ್ ಮುಂಜಾನೆಯಾಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಗಲು ವೇಳೆ ಈ ಅವಘಡ ನಡೆದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಹಾಗಾಗಿಲ್ಲ ಎಂದು ಎಲ್ಲರೂ ನಿಟ್ಟುಸಿರುವ ಬಿಟ್ಟಿದ್ದಾರೆ.

ಸಾವಿರಾರು ವರ್ಷ ಇತಿಹಾಸ ಹೊಂದಿರುವ ಕೋಟೆಯ ತಡೆಗೋಡೆಯ ಒಂದು ಭಾಗ ಕುಸಿದಿರುವುದರಿಂದ ಮುಂದೇನು ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮೂರ್ತಿ ಸುತ್ತಲೂ ಕೋಟೆ ಕಟ್ಟಲಾಗಿದೆ. ಇದರ ಉತ್ತರಾಭಿ ಮುಖದ ತಡೆಗೋಡೆಯ ಒಂದು ಭಾಗ ಜೋರು ಮಳೆಯಿಂದ ಕಳಚಿ ಬಿದ್ದಿದೆ.

ಇದರಿಂದ ಬೆಟ್ಟಕ್ಕೆ ಹತ್ತುವ ಕಲ್ಲಿನ ಮೆಟ್ಟಿಲು ದಾರಿ ಮಧ್ಯೆ ಭಾರೀ ಗಾತ್ರದ ಬಂಡೆಗಳು ಉರುಳಿದ್ದು, ಬೆಟ್ಟದ ತಪ್ಪಲು ಜನ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಟ್ಟ ಹತ್ತುವುದಕ್ಕೆ ನಿರ್ಬಂಧ ಹೇರಲಾಗಿದೆ. ಕುಸಿತಗೊಂಡಿರುವ ತಡೆಗೋಡೆ ಸರಿ ಮಾಡುವ ಕಾರ್ಯ ಮುಗಿಯುವವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ತಡೆಗೋಡೆ ಶಿಥಿಲವಾಗಿದ್ದು, ಕುಸಿಯುವ ಬಗ್ಗೆ ಇಲಾಖೆಯ ಸಿಬ್ಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಅವರು ತುರ್ತು ಗಮನ ಹರಿಸದ ಕಾರಣ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಮುಂಜಾನೆ ಘಟನೆ ನಡೆದಿದ್ದರೂ, ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಬಾರದೇ ಇರುವುದಕ್ಕೆ ಆಕ್ರೋಶ ಹೊರ ಹಾಕಿದರು. ಕೂಡಲೇ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು, ಇಂದೂ ಸಹ ಮಳೆ ಸುರಿದರೆ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಏನಾದರೂ ಪ್ರಾಣಹಾನಿಯಾದರೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಎರಡು ದಿನಗಳ ಒಳಗೆ ಆಗಿರುವ ಹಾನಿಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೂ ದೂರವಾಣಿ ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಪ್ರಧಾನ ಮಂತ್ರಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೂ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದರು.

Join Whatsapp
Exit mobile version