ಪಾಣಿಪತ್: ಹರಿಯಾಣದ ಪಾಣಿಪತ್ನಲ್ಲಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಲಿ ರೈಲಿನಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 26ರಂದು ತನ್ನ ಪತ್ನಿ ನಾಪತ್ತೆ ಆಗಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆನಂತರ ಆಕೆ ರೈಲ್ವೆ ಹಳಿಯ ಮೇಲೆ ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿತ್ತು.
ರೈಲು ನಿಲ್ದಾಣದ ಸಮೀಪ ಮಹಿಳೆ ಕುಳಿತಿದ್ದಾಗ ವ್ಯಕ್ತಿಯೊಬ್ಬರು, ‘ನಿನ್ನ ಪತಿ ನನ್ನನ್ನು ಕಳುಹಿಸಿದ್ದಾರೆ’ ಎಂದು ಪರಿಚಯಿಸಿಕೊಂಡರು. ಆನಂತರ ಖಾಲಿ ಬೋಗಿಗೆ ಕರೆದೊಯ್ದು, ಮತ್ತಿಬ್ಬರ ಜತೆ ಸೇರಿ ಅತ್ಯಾಚಾರ ಎಸಗಿದರು. ಮಹಿಳೆ ಈ ಸಂಗತಿಯನ್ನು ತಿಳಿಸಿರುವುದಾಗಿ ಕಿಲಾ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಜ್ಞೆ ತಪ್ಪಿದ್ದ ಆಕೆಯನ್ನು ರೈಲ್ವೆ ಹಳಿ ಮೇಲೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ರೈಲು ಹರಿದು ಆಕೆಯ ಕಾಲು ಮುರಿದಿದೆ. ಎಫ್ಐಆರ್ ದಾಖಲಿಸಿ ರೈಲ್ವೆ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
