ನವದೆಹಲಿ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿದ್ವಾರ ಧರ್ಮ ಸಂಸದ್ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ವಾಸೀಂ ರಿಝ್ವಿ ಗೆ ಸೆಪ್ಟೆಂಬರ್ 2 ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ.
ಈ ಹಿಂದೆ ವಾಸೀಂ ರಿಝ್ವಿ ಎಂದು ಕರೆಯಲ್ಪಡುತ್ತಿದ್ದ ತ್ಯಾಗಿ ಪ್ರಸ್ತುತ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿದ್ದಾರೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ವೈದ್ಯಕೀಯ ಕಾರಣಗಳಿಗಾಗಿ ಈ ಹಿಂದೆ ನೀಡಿದ್ದ ಜಾಮೀನನ್ನು ವಿಸ್ತರಿಸಲು ನಿರಾಕರಿದ್ದು, ತ್ಯಾಗಿ ಸಲ್ಲಿಸಿದ ನಿಯಮಿತ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 9 ರಂದು ಪರಿಗಣಿಸುವುದಾಗಿ ಹೇಳಿದೆ.
“ಅವರಿಗೆ ಪರಿಹಾರ ನೀಡಲು ಯಾವುದೇ ಕಾರಣವಿಲ್ಲ. ಅವರ ವಿರುದ್ಧ ಅನೇಕ ಪ್ರಕರಣಗಳು ಬಾಕಿ ಇವೆ. ಶರಣಾಗುವಂತೆ ಅವರಿಗೆ ಹೇಳಿ’ ಎಂದು ನ್ಯಾಯಪೀಠ ತ್ಯಾಗಿ ಪರ ವಕೀಲರಿಗೆ ಆದೇಶಿಸಿದೆ..
ವೈದ್ಯಕೀಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮೇ 17 ರಂದು ತ್ಯಾಗಿಗೆ ದ್ವೇಷದ ಭಾಷಣದಲ್ಲಿ ತೊಡಗುವುದಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿತು.
ಈ ವರ್ಷದ ಮಾರ್ಚ್ ನಲ್ಲಿ ಉತ್ತರಾಖಂಡ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ತ್ಯಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.