ತಿರುವನಂತಪುರಂ : ಕೇರಳದ ಸಿಪಿಎಂ ಬೆಂಬಲಿತ ಸೈಬರ್ ಟ್ರೋಲಿಗರು ತನ್ನನ್ನು ಹಾಗೂ ತನ್ನ ಕುಟುಂಬವನ್ನು ಗುರಿಯಾಗಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ಖ್ಯಾತ ಮಲಯಾಳಂ ಸುದ್ದಿವಾಹಿನಿಯ ಮಾಜಿ ಪತ್ರಕರ್ತೆಯೊಬ್ಬರು ಆಪಾದಿಸಿದ್ದಾರೆ. ಅಲ್ಲದೆ, ತಮಗೆ ಈ ರೀತಿ ಹಿಂಸೆ ಕೊಡುವ ಬದಲು, ತನ್ನನ್ನು ಹಾಗೂ ತನ್ನ ಪತಿಯನ್ನು ಒಂದೇ ಏಟಿಗೆ ಹೊಡೆದು ಸಾಯಿಸುವಂತೆ ತಿಳಿಸಿದ್ದಾರೆ.
ಪತ್ರಕರ್ತೆ ವಿನೀತಾ ವೇಣು ಅವರ ಪತಿ ಕೋಝಿಕ್ಕೋಡ್ ಜಿಲ್ಲೆಯ ಚೊಂಬಾಲ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವರು ಮನೆಗೆ ಹಿಂದಿರುಗುವಾಗ ಈಶಾನ್ಯ ರಾಜ್ಯಗಳ ಕಡೆ ಸೇವೆಯಲ್ಲಿ ನಿಯೋಜಿತರಾಗಿರುವ ಯೋಧ, ಸ್ನೇಹಿತ ತಮ್ಮ ಕುಟುಂಬದ ಬಗ್ಗೆ ವಿಚಾರಿಸಿಕೊಂಡು ಹೋಗುವಂತೆ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಣ್ಣೂರು ಜಿಲ್ಲೆಯ ಪಾಯಂನಲ್ಲಿರುವ ತಮ್ಮ ಮನೆ ಸಮೀಪದ ಸ್ನೇಹಿತನ ಮನೆಗೆ ಯೋಗಕ್ಷೇಮ ವಿಚಾರಣೆಗೆಂದು ತೆರಳಿದ್ದರು.
ಸ್ನೇಹಿತನ ಮನೆ ಸಮೀಪ ಬಂದು ಬೈಕ್ ನಿಲ್ಲಿಸಿ, ಫೋನ್ ಕರೆಯಲ್ಲಿ ಮಾತನಾಡುತ್ತಿದ್ದಾಗ ಅಲ್ಲಿ ನಾಲ್ಕೈದು ಮಂದಿ ಕುಡುಕ ಯುವಕರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿ, ಗದ್ದಲ ಎಬ್ಬಿಸಿತ್ತು. ಬಳಿಕ ಪೊಲೀಸರು ಬಂದು ಅವರನ್ನು ರಕ್ಷಿಸಿದ್ದರು.
ಈ ವಿಷಯವಾಗಿ ಇದೀಗ ಸಿಪಿಎಂ ಬೆಂಬಲಿತ ಸೈಬರ್ ಟ್ರೋಲಿಗರು ತಮ್ಮ ಕುಟುಂಬವನ್ನು ಗುರಿಯಾಗಿಸಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಪತ್ರಕರ್ತೆ ವಿನೀತಾ ಹೇಳಿದ್ದಾರೆ. ೨೦೧೮ರಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತ ಸುಹೇಬ್ ಹತ್ಯೆ ಕುರಿತು ತಾವು ವರದಿ ಮಾಡಿದ ಬಳಿಕ, ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಾನು ಖ್ಯಾತ ಸುದ್ದಿ ವಾಹಿನಿಯಐಾಲ್ಲಿ ಕೆಲಸ ಮಾಡುತ್ತಿದ್ದಾಗ, ಕೋವಿಡ್ ರೋಗಿಗಳ ದಾಖಲೆ ಬಹಿರಂಗವಾದ ಬಗ್ಗೆ ವರದಿ ಮಾಡಿದ ಬಳಿಕವೂ ನನ್ನನ್ನು ಗುರಿಯಾಗಿಸಲಾಗದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕಿರುವ ವಿನೀತಾ, “ನಾನು, ನನ್ನ ಪತಿ ಮತ್ತು ನನ್ನ ಚಿಕ್ಕ ಮಕ್ಕಳು ಕಣ್ಣೂರು ನಗರ ವೃತ್ತಕ್ಕೆ ಬರುತ್ತೇವೆ. ನಮ್ಮನ್ನು ಮುಗಿಸಿ ಬಿಡಿ, ಆದರೆ, ದಯವಿಟ್ಟು ಎಲ್ಲರನ್ನೂ ಒಂದೇ ಏಟಿಗೆ ಕೊಂದು ಬಿಡಿ” ಎಂದು ಬರೆದಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.