ನವದೆಹಲಿ : ಕೋವಿಡ್ ಸಂಬಂಧಿತ ಆಡಳಿತಾತ್ಮಕ ವೈಫಲ್ಯಗಳ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳ ಬಗ್ಗೆ ಆಡಳಿತಾರೂಢ ಬಿಜೆಪಿ ಸರಕಾರಗಳ ಅಸಹಿಷ್ಣುತೆಯ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ . ಉತ್ತರ ಪ್ರದೇಶದ ಸೇತುವೆಯೊಂದರ ಮೇಲಿನಿಂದ ಹೆಣಗಳನ್ನು ಎಸೆದ ಬಗ್ಗೆ ವರದಿ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕೋವಿಡ್ ನಿರ್ವಹಣೆ ಸಂಬಂಧಿತ ಸ್ವಯಂ ಪ್ರೇರಿತ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ನ್ಯಾಯಪೀಠದ ಮುಖ್ಯಸ್ಥ ನ್ಯಾ. ಡಿ.ವೈ. ಚಂದ್ರಚೂಡ್ ಈ ಹೇಳಿಕೆ ನೀಡಿದ್ದಾರೆ.
“ನದಿಯಲ್ಲಿ ಹೆಣಗಳನ್ನು ಎಸೆಯುತ್ತಿರುವುದರ ಬಗ್ಗೆ ನಿನ್ನೆ ಸುದ್ದಿಯೊಂದನ್ನು ತೋರಿಸಲಾಗುತಿತ್ತು. ಆ ಚಾನೆಲ್ ವಿರುದ್ಧ ಇಷ್ಟರಲ್ಲೇ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆಯೇ? ಎಂಬುದು ಗೊತ್ತಿಲ್ಲ” ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ.
ಸಾಂಕ್ರಾಮಿಕತೆ ಕುರಿತಂತೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಂವಹನ ನಡೆಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.
ಕೋವಿಡ್ ಪ್ರಕರಣಗಳಿಗೆ ಸಹಾಯ ಪಡೆಯುವ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮನವಿಗಳನ್ನು ಸಲ್ಲಿಸುವವರ ವಿರುದ್ಧ ಕಠಿಣ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಈ ಹೇಳಿಕೆ ನೀಡಿದೆ.