Home ಕರಾವಳಿ ಭರತ್ ಶೆಟ್ಟಿ ಅವರಂತಹ ಹರಕು ಬಾಯಿಯ ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವಂಥದ್ದಲ್ಲ: ಇನಾಯತ್ ಅಲಿ

ಭರತ್ ಶೆಟ್ಟಿ ಅವರಂತಹ ಹರಕು ಬಾಯಿಯ ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವಂಥದ್ದಲ್ಲ: ಇನಾಯತ್ ಅಲಿ

ಮಂಗಳೂರು: ಭರತ್ ಶೆಟ್ಟಿ ಅವರಂತಹ ಹರಕು ಬಾಯಿಯ ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವಂಥದ್ದಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ತಿಳಿಸಿದ್ದಾರೆ.

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನ ಸಾಂವಿಧಾನಿಕ ಹುದ್ದೆ, ಅದಕ್ಕೆ ಗೌರವ ಕೊಡ್ತೀವಿ ಅಂತಾರೆ. ಇನ್ನೊಂದು ಕಡೆ ಈ ರೀತಿ ಹರಕು ಬಾಯಿಯ ನಾಯಕರಿಂದ ನಮ್ಮ ನಾಯಕರಾದ ಛಾಯಾ ಪ್ರಧಾನಿಯೆಂದು ಪರಿಗಣಿಸುವ ಪ್ರತಿಪಕ್ಷದ ನಾಯಕರಾದ ರಾಹುಲ್‌ ಗಾಂಧಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಲು ಪ್ರಚೋದಿಸುತ್ತಾರೆ. ರಾಹುಲ್ ಗಾಂಧಿಯವರು “ಹಿಂದೂ ಧರ್ಮ ಭಯ ಹುಟ್ಟಿಸುವುದಿಲ್ಲ, ಅಭಯ ನೀಡುತ್ತದೆ. ಸತ್ಯವನ್ನು ಪ್ರತಿಪಾದಿಸುತ್ತದೆ. ದ್ವೇಷ ಮತ್ತು ಹಿಂಸೆಯನ್ನು ಒಪ್ಪುವುದಿಲ್ಲ.ಆದರೆ ಬಿಜೆಪಿ ಮತ್ತು ಪರಿವಾರ ಅದನ್ನು ಮಾಡುತ್ತಿದೆ. ಸಮಸ್ತ ಹಿಂದೂ ಸಮಾಜವನ್ನು ಮೋದಿ ಅಥವಾ ಬಿಜೆಪಿ ಪ್ರತಿನಿಧಿಸುವುದಿಲ್ಲ” ಎಂದು ಹೇಳಿದ್ದಾರೆಯೇ ಹೊರತು ಹಿಂದೂ ಧರ್ಮೀಯರನ್ನು ಟೀಕಿಸಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ತಿಳಿಸಿದ್ದಾರೆ‌.

ಹಿಂದೂಗಳನ್ನು ಬಹುಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವ ಶಂಕರ ಪೀಠದ ಉಜ್ಜಯಿನಿಯ ಪೂಜ್ಯ ಗುರುಗಳೂ ರಾಹುಲ್ ಗಾಂಧಿಯವರು ಹಿಂದೂ ಧರ್ಮಕ್ಕೆ ಎನೂ ಹೇಳಿಲ್ಲ. ಅದು ಬಿಜೆಪಿಗೆ ಎಂದಿದ್ದಾರೆ. ಇಷ್ಟೂ ತಿಳಿಯದೇ ದಡ್ಡರಂತೆ ಡಾ ಭರತ್ ಶೆಟ್ಟಿ ರಾಹುಲ್ ಗಾಂಧಿ ಅವರ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ನಾಲಿಗೆಯ ಚಪಲ ತೀರಿಸಿಕೊಂಡಿದ್ದಾರೆ ಎಂದಿದ್ದಾರೆ.

ದಯೆ ಇಲ್ಲದ ಧರ್ಮ ಯಾವುದಯ್ಯಾ? ಎಂದು ಬಸವಣ್ಣ ಹೇಳುತ್ತಾರೆ. ಯಾವುದೇ ಧರ್ಮವಾಗಲಿ ಹೊಡಿ, ಬಡಿ, ಕೊಲ್ಲು ಎಂದು ಹೇಳಿಕೊಡುವುದಿಲ್ಲ. ಮಾನವೀಯತೆಯೇ ಎಲ್ಲಾ ಧರ್ಮಗಳ ಅಡಿಪಾಯ. ಶಾಸಕ ಭರತ್‌ ಶೆಟ್ಟಿ ಅವರ ಹೇಳಿಕೆಯು ಅವರ ಯೋಗ್ಯತೆಗೆ ಹಿಡಿದ ಕನ್ನಡಿಯಂತಿದೆ. ಅವರ ಮಟ್ಟಕ್ಕೆ ಇಳಿದು ಮಾತನಾಡುವುದು ಎಂದರೆ ಕೊಚ್ಚೆಗೆ ಕಲ್ಲೆಸದಂತೆ. ಶಾಸಕರು ಮತ್ತು ಎಂ ಪಿಗಳು ತಮ್ಮ ಘನತೆ ಗೌರವ ಮರೆತು ಪಡ್ಡೆ ಹುಡುಗರಂತೆ ಮಾತನಾಡಿ ಬಿಜೆಪಿ ಮತ್ತು ಪರಿವಾರದ ಸಂಸ್ಕೃತಿ ಏನೆಂದು ಜಗತ್ತಿಗೆ ತಿಳಿಸಿದ್ದಾರೆ ಎಂದು ಇನಾಯತ್ ಅಲಿ ಆಕ್ರೋಶ ಹೊರಹಾಕಿದ್ದಾರೆ.

ಭರತ್‌ ಶೆಟ್ಟಿ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷವಷ್ಟೇ ಅಲ್ಲ, ಮಾನವೀಯತೆ ನಂಬುವ ಮತ್ತು ಸಂವಿಧಾನವನ್ನು ಗೌರವಿಸುವ ಎಲ್ಲರೂ ವಿರೋಧಿಸುತ್ತಾರೆ. ಭರತ್‌ ಅವರಂತಹ ಹರಕು ಬಾಯಿಯ ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವಂತದ್ದಲ್ಲ. ರಾಹುಲ್ ಗಾಂಧಿಯವರ ಕೆನ್ನೆಗೆ ಹೊಡೆಯುತ್ತೇನೆ ಎಂಬ ಅವರ ಹೇಳಿಕೆಯನ್ನು ರಾಜ್ಯ ಮತ್ತು ಕೇಂದ್ರ ಬಿಜೆಪಿ ಒಪ್ಪುತ್ತದೋ ಎಂದು ಸ್ಪಷ್ಟವಾಗಿ ತಿಳಿಸಬೇಕಿದೆ ಎಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಭರತ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರು ನೀಡುತ್ತೇವೆ ಎಂದೂ ತಿಳಿಸಿದ್ದಾರೆ.

Join Whatsapp
Exit mobile version