ಇಂಡಿಯನ್ ಪ್ರೀಮಿಯರ್ ಲೀಗ್ ನ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿಯುವ ಮೂಲಕ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿಲ್ ಸಾಲ್ಟ್ 32 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 31 ರನ್ ಕಲೆಹಾಕಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಜತ್ ಪಾಟಿದಾರ್ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 51 ರನ್ ಚಚ್ಚಿದರು. ಹಾಗೆಯೇ ಅಂತಿಮ ಓವರ್ ನಲ್ಲಿ 3 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಟಿಮ್ ಡೇವಿಡ್ ಆರ್ ಸಿಬಿ ತಂಡದ ಸ್ಕೋರ್ ಅನ್ನು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗೆ ತಂದು ನಿಲ್ಲಿಸಿದರು.
197 ರನ್ಗಳ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಪರ ರಚಿನ್ ರವೀಂದ್ರ 41 ರನ್ ಬಾರಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 50 ರನ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ ಕೆ ತಂಡದ ನಾಯಕ ರುತುರಾಜ್ ಸೋತರೂ ಖುಷಿಯಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಜ ಹೇಳಬೇಕೆಂದರೆ, ಈ ಪಿಚ್ ನಲ್ಲಿ 170 ರನ್ ಗಳನ್ನು ಚೇಸ್ ಮಾಡಬಹುದು ಎಂದು ಇನ್ನೂ ಅನಿಸುತ್ತಿದೆ. ಆದರೆ ನಾವು ಫೀಲ್ಡಿಂಗ್ ನಲ್ಲಿ ಮಾಡಿದ ತಪ್ಪುಗಳಿಂದ ದೊಡ್ಡ ಬೆಲೆ ತೆರಬೇಕಾಯಿತು.ಏಕೆಂದರೆ ನಮ್ಮ ತಪ್ಪುಗಳಿಂದ ನಾವು ಹೆಚ್ಚುವರಿ 20 ರನ್ ಗಳನ್ನು ನೀಡಿದೆವು. ಹೀಗಾಗಿ ಬೃಹತ್ ಮೊತ್ತವನ್ನು ಚೇಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ದೊಡ್ಡ ಮೊತ್ತವನ್ನು ಬೆನ್ನತ್ತುವಾಗ ನಮ್ಮ ಬ್ಯಾಟಿಂಗ್ ಕೂಡ ವಿಭಿನ್ನವಾಗಿರುತ್ತದೆ. ಅದರಲ್ಲೂ ಪವರ್ ಪ್ಲೇನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.