Home ಟಾಪ್ ಸುದ್ದಿಗಳು ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳು: ಡಾ. ಎಲ್.ಹನುಮಂತಯ್ಯ

ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳು: ಡಾ. ಎಲ್.ಹನುಮಂತಯ್ಯ


ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆಗೆ ಯುಪಿಎ ಸರ್ಕಾರವೇ ಕಾರಣ ಎಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ 70 ವರ್ಷಗಳಲ್ಲಿ ಮಾಡಿದ ಸಾಲವನ್ನು ಮೋದಿ ಸರ್ಕಾರ 7 ವರ್ಷಗಳಲ್ಲಿ ಮಾಡಿರುವುದೇ ಅವರ ನಿಜವಾದ ಸಾಧನೆ ಎಂದು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ತಿಳಿಸಿದ್ದಾರೆ.


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹನುಮಂತಯ್ಯ, ಬಿಜೆಪಿಯ ಆರೋಪಗಳನ್ನು ನಿರಾಕರಿಸಿದರು. ‘ಇತ್ತೀಚೆಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಪೆಟ್ರೋಲ್ ಬೆಲೆ ಏರಿಕೆಗೆ ಬಿಜೆಪಿ ಸರ್ಕಾರ ಕಾರಣವಲ್ಲ, ಈ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಈ ಆರೋಪ ಸತ್ಯಕ್ಕೆ ದೂರವಾದುದ್ದು. ಕಾರಣ, ಕಚ್ಚಾ ತೈಲ ಬೆಲೆ ಆಧಾರದ ಮೇಲೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿ ಮಾಡುವ ಪ್ರಕ್ರಿಯೆ ಯುಪಿಎ ಸರ್ಕಾರದಿಂದಲೇ ಆರಂಭವಾಗಿದೆ. 2008ರಲ್ಲಿ ಕಚ್ಚಾತೈಲ ಬೆಲೆ 139.10 ಡಾಲರ್ ಇತ್ತು. ಆಗ ದೇಶದಲ್ಲಿ ಪೆಟ್ರೋಲ್ ಬೆಲೆ 50.62 ರೂಪಾಯಿ ಇತ್ತು. 2013ರಲ್ಲಿ ಕಚ್ಚಾತೈಲ ಬೆಲೆ 110.80 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 66.09 ರೂಪಾಯಿ ಇತ್ತು. ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಕಚ್ಛಾತೈಲ ಬೆಲೆ 57.333 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 72.23 ರೂಪಾಯಿ ಇತ್ತು. 2018ರಲ್ಲಿ ಕಚ್ಚಾತೈಲ ದರ 53.80 ಡಾಲರ್ ಇದ್ದಾಗ ಆಗ ಪೆಟ್ರೋಲ್ ಬೆಲೆ 75.55 ರೂಪಾಯಿ ಆಗಿತ್ತು. 2020ರಲ್ಲಿ ಕಚ್ಚಾತೈಲ ಬೆಲೆ 51.08 ಡಾಲರ್ ಗೆ ಬಂದಾಗ ಪೆಟ್ರೋಲ್ 86.52 ರೂಪಾಯಿ ಆಗಿತ್ತು. 2021ರಲ್ಲಿ 72.22 ಡಾಲರ್ ಆಗಿದ್ದು ಪೆಟ್ರೋಲ್ ಬೆಲೆ 99.81 ರೂಪಾಯಿ ಆಗಿದೆ. ಕಾಂಗ್ರೆಸ್ ಸರ್ಕಾರ ಕಚ್ಚಾತೈಲ ಬೆಲೆ 139 ಡಾಲರ್ ಇದ್ದಾಗ 50 ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡಲಾಗಿತ್ತು, ಆದರೆ ಎನ್ ಡಿಎ ಅವಧಿಯಲ್ಲಿ ಕಚ್ಚಾತೈಲ ಬೆಲೆ 72 ಡಾಲರ್ ಇದ್ದಾಗ ಪೆಟ್ರೋಲ್ 98 ರೂಪಾಯಿ ಆಗಿದೆ’ ಎಂದು ವಿವರಿಸಿದರು.


‘2014ರಲ್ಲಿ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 9.84% ರಷ್ಟು ತೆರಿಗೆ ಹಾಕಲಾಗಿತ್ತು. ಈಗ 31.90% ತೆರಿಗೆ ಹಾಕಲಾಗುತ್ತಿದೆ. ಡೀಸೆಲ್ ಮೇಲೆ ಆಗಿನ ಸರ್ಕಾರ 3.56% ತೆರಿಗೆ ಹಾಕಿದರೆ ಈಗಿನ ಸರ್ಕಾರ 31.80% ಗೆ ಏರಿಕೆಯಾಗಿದೆ. ಅಲ್ಲಿಗೆ ಡೀಸೆಲ್ ಮೇಲಿನ ತೆರಿಗೆಯನ್ನು 10 ಪಟ್ಟು ಹೆಚ್ಚು ಮಾಡಲಾಗಿದೆ. ಇದರಿಂದ ಮಧ್ಯಮವರ್ಗ, ಕೆಳ ವರ್ಗದವರಿಗೆ ಹೊರೆಯಾಗಿದೆ. ಈ ಮಧ್ಯೆ ಬಿಜೆಪಿ ಸರ್ಕಾರ ಇದಕ್ಕೆ ಕಾಂಗ್ರೆಸ್ ಮೆಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.


‘ಯುಪಿಎ ಅವಧಿಯಲ್ಲಿ ಪೆಟ್ರೋಲ್ ಬಾಂಡ್ ಗಳನ್ನು ಮಾರಾಟ ಮಾಡಲಾಗಿತ್ತು. ಈವರೆಗೂ 1.30 ಲಕ್ಷ ಕೋಟಿಯಷ್ಟು ಆಯಿಲ್ ಬಾಂಡ್ ಗಳನ್ನು ನೀಡಲಾಗಿದೆ. ಇದನ್ನು 2002ರಲ್ಲಿ ವಾಜಪೇಯಿ ಅವರ ಸರ್ಕಾರ ಇದ್ದಾಗ ಆರಂಭಿಸಲಾಗಿತ್ತು. ಆಗಿನ ಎನ್ ಡಿಎ ಸರ್ಕಾರ 9 ಸಾವಿರ ಕೋಟಿಯಷ್ಟು ತೈಲ ಬಾಂಡ್ ವಿತರಣೆ ಮಾಡಿತ್ತು. ಅದನ್ನೇ ಯುಪಿಎ ಸರ್ಕಾರ ಮುಂದುವರಿಸಿತ್ತು. ಇದರ ಬಡ್ಡಿ ಹೊರೆಯನ್ನು ನಾವು ಹೊತ್ತಿದ್ದು, ಹೀಗಾಗಿ ಜನರ ಮೇಲೆ ತೆರಿಗೆ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಕೇಂದ್ರ ಸರ್ಕಾರ ಈ ಹೊರೆ ನಿಭಾಯಿಸಲು ಎಷ್ಟು ಹಣ ಖರ್ಚು ಮಾಡಿದೆ ಎಂಬ ಲೆಕ್ಕ ನೀಡಬೇಕು. ಆವರೆಗೂ ತೈಲ ಬಾಂಡ್ ಗಳನ್ನು ವಾಪಸ್ ಮಾಡಿರುವುದು ಕೇವಲ ಮೂರೂವರೆ ಸಾವಿರದಷ್ಟು ಮಾತ್ರ’ ಎಂದರು.


‘ಕೇಂದ್ರ ಸರ್ಕಾರ ಇತರೆ ಮೂಲಗಳಿಂದ ಸಂಗ್ರಹಿಸಬೇಕಾದ ತೆರಿಗೆ ಪ್ರಮಾಣ ಕಡಿಮೆಯಾಗಿದ್ದು, ಇದನ್ನು ಸರಿದೂಗಿಸಲು ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡುತ್ತಿದೆ. ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಇದು ಕರ್ನಾಟಕದ 10 ವರ್ಷಗಳ ಬಜೆಟ್ ಆಗಿದೆ. ಪ್ರಧಾನಮಂತ್ರಿಗಳು ಹಾಗೂ ಅವರ ಮಂತ್ರಿಗಳು ಹೀಗೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು ಎಂದರು.


‘ಕಾಂಗ್ರೆಸ್ ಸರ್ಕಾರ 70 ವರ್ಷಗಳಲ್ಲಿ 50 ಲಕ್ಷ ಕೋಟಿ ಸಾಲ ಮಾಡಿತ್ತು. ಆದರೆ ಬಿಜೆಪಿ ಮೋದಿ ಅವರ ಅವಧಿಯಲ್ಲಿ 50 ಲಕ್ಷ ಕೋಟಿ ಸಾಲ ಮಾಡಿದೆ. ಒಂದು ಕಡಿ ಆತ್ಮನಿರ್ಭರ ಭಾರತ ಕಟ್ಟುತ್ತೇವೆ ಎನ್ನುವ ಬಿಜೆಪಿ, ಕಾಂಗ್ರೆಸ್ 70 ವರ್ಷದಲ್ಲಿ ಮಾಡಿದ ಸಾಲವನ್ನು ಬಿಜೆಪಿ 7 ವರ್ಷಗಳಲ್ಲಿ ಮಾಡಿದೆ. ಆತ್ಮನಿರ್ಭರ ಭಾರತ ಎಂಬುದು ಬೋಗಸ್ ಘೋಷಣೆಯಾಗಿದೆ. ಕಾಂಗ್ರೆಸ್ ದೇಶದ ಜನರಿಗೆ ಕೊಂಡುಕೊಳ್ಳಬಹುದಾದ ಬೆಲೆಗೆ ಅಡುಗೆ ಅನಿಲ ಪೂರೈಸಿದೆ. ಆದರೆ ಬಿಜೆಪಿ 7 ವರ್ಷದಲ್ಲಿ ಅಡುಗೆ ಅನಿಲದ ದರ ದುಪ್ಪಟ್ಟು ಮಾಡಿ ಸುಲಿಗೆ ಮಾಡುತ್ತಿದೆ’ ಎಂದು ವಿವರಿಸಿದರು.


4 ಲಕ್ಷ ಪರಿಹಾರ ಕೋಡಲಾಗುವುದಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ:‘ಕೋವಿಡ್ ಪಿಡುಗಿನಲ್ಲಿ ಮೃತಪಟ್ಟವರಿಗೆ ವಿಪತ್ತು ನಿರ್ವಹಣಾ ನಿಧಿಯಿಂದ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಿಲ್ಲ ಕೇಂದ್ರ ಸರ್ಕಾರ ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ಅಫಿಡವಿಟ್ ನಲ್ಲಿ, ವಿಪತ್ತು ನಿರ್ವಹಣಾ ನಿಧಿಯಲ್ಲಿ 222,184 ಕೋಟಿ ರೂಪಾಯಿ ಮಾತ್ರ ಇದೆ. ಇದನ್ನು ಕೋವಿಡ್ ಮೃತರಿಗೆ ಪರಿಹಾರವಾಗಿ 4 ಲಕ್ಷ ನೀಡಿದರೆ ದೇಶದ ಇತರೆ ವಿಪತ್ತಿನ ಸಮಯದಲ್ಲಿ ಹಾಗೂ ಸಾರ್ವಜನಿಕರಿಗೆ ನೀಡುವ ಇತರೆ ಪರಿಹಾರ ನೀಡಲು ಹಣ ಉಳಿಯುವುದಿಲ್ಲ ಎಂದು ಹೇಳಿದೆ. ಇನ್ನು ಸಂವಿಧಾನದ 7ನೇ ಶೆಡ್ಯುಲ್ ನಲ್ಲಿ ಆರೋಗ್ಯ ಕ್ಷೇತ್ರ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ ಎಂದಿದೆ. ಆದರೆ ನಾವು ಕೇಳುತ್ತಿರುವುದು ಪಿಎಂ ಕೇರ್ ಮೂಲಕ ಸಂಗ್ರಹಿಸಲಾದಿ ದೇಣಿಗೆಯಲ್ಲಿ ಎಷ್ಟು ಖರ್ಚಾಗಿದೆ, ಎಷ್ಟು ಉಳಿದಿದೆ? ಇದರಲ್ಲಿ ಉಳಿದ ಹಣವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಯಾಕೆ ವರ್ಗಾಯಿಸಿ ಪರಿಹಾರ ನೀಡಬಾರದು?’ ಎಂದು ಪ್ರಶ್ನಿಸಿದರು.


ಮುಖ್ಯಮಂತ್ರಿ ಚರ್ಚೆ ಈಗ ಅಪ್ರಸ್ತುತ: ‘ದಲಿತರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ಎಲ್ಲರ ಇಚ್ಛೆಯಾದರೂ ಅದರ ಚರ್ಚೆ ಈಗ ಅಪ್ರಸ್ತುತ. ಮುಖ್ಯಮಂತ್ರಿ ಚರ್ಚೆ ಯಾವಾಗ ಬರುತ್ತದೆ ಎಂದರೆ ಚುನಾವಣೆಯಲ್ಲಿ ಪಕ್ಷ ಬಹುಮಾತ ಗಳಿಸಿದಾಗ ಮಾತ್ರ ಸಿಎಂ ಯಾರಾಗಬೇಕು ಎಂಬ ಚರ್ಚೆ ಬರುತ್ತದೆ. ಕೆ.ಎಚ್ ಮುನಿಯಪ್ಪ ಹಾಗೂ ಹರಿಪ್ರಸಾದ್ ಅವರು ಭೇಟಿಯಾಗುತ್ತಲೇ ಇರುತ್ತಾರೆ. ಇವರ ಜತೆ ಪರಮೇಶ್ವರ್ ಅವರು ಕುಶಲೋಪರಿ ಭೇಟಿ ಮಾಡಿದ್ದು, ಅದನ್ನು ದಲಿತ ಸಿಎಂ ಚರ್ಚೆ ಎಂದು ಬಿಂಬಿಸುವ ಅಗತ್ಯವಿಲ್ಲ. ದಲಿತರು ಮುಖ್ಯಮಂತ್ರಿ ಆಗುವುದಾದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ದಲಿತ ಸಿಎಂ ಚರ್ಚೆ ಎಂಬುದು ಹೊಸ ವಿಚಾರವಲ್ಲ. ಈ ಹಿಂದೆಯೂ ದಲಿತ ಸಿಎಂ ಚರ್ಚೆಗೆ ಬಂದಿತ್ತು. ಆದರೆ ಕಾಲಾವಕಾಶ ಕೂಡಿ ಬಂದಿಲ್ಲ. ಚುನಾವಣೆಗೂ ಮುನ್ನವೇ ಸಿಎಂ ಅಭ್ಯರ್ಥಿ ಘೋಷಿಸಿ ಚುನಾವಣೆಗೆ ಹೋಗುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿಲ್ಲ. ಚುನಾವಣೆ ಮುಗಿದ ಬಳಿಕ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಲಿದೆ. ನಮ್ಮ ಅಧ್ಯಕ್ಷರು ಈಗಾಗಲೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ ಎಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿಎಂ ವಿಚಾರ ಈಗ ಅಪ್ರಸ್ತುತ’ ಎಂದರು.


‘ಜೂನ್ 14ರಂದು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ 2 ಕೋಟಿ ರೂಪಾಯಿಗೆ ಹರೀಶ್ ಮತ್ತು ಕುಸುಮ್ ಪಾಟಕ್ ಅವರು ಭೂಮಿ ಖರೀದಿ ಮಾಡುತ್ತಾರೆ. ನಂತರ ಐದೇ ನಿಮಿಷಗಳಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಗೆ ಅದೇ ಭೂಮಿಯನ್ನು 18 ಕೋಟಿಗೆ ಮಾರಾಟ ಮಾಡಲಾಗಿದೆ. ಇದರ ಜತೆಗೆ ರಾಮಜನ್ಮ ಭೂಮಿ ಟ್ರಸ್ಟ್ ಇದೇ ಹರೀಶ್ ಮತ್ತು ಕುಸುಮ್ ಅವರಿಂದ 8 ಕೋಟಿಗೆ ಬೇರೆ ಕಡೆ ಜಮೀನನ್ನು ಖರೀದಿಸಿದೆ. ಅಂದರೆ ಟ್ರಸ್ಟ್ ಇವರಿಬ್ಬರಿಂದ 25 ಕೋಟಿ ರೂಪಾಯಿ ನೀಡಿ ಮಂದಿರ ನಿರ್ಮಾಣಕ್ಕೆ ಭೂಮಿ ಖರೀದಿಸಿದೆ. ಮಹಂತ್ ಧರ್ಮದಾಸ್, ಮಹಂತ್ ಸುರೇಶ್ ದಾಸ್ ಹಾಗೂ ಮಹಂತ್ ಸೀತರಾಮ್ ಎಂಬ ಕಾವಿಧಾರಿಗಳು ಹಾಗೂ ಉನ್ನತಮಟ್ಟದ ಹಿಂದೂ ಸಮಾಜದ ಯೋಗಿಗಳಾಗಿದ್ದು, ಇವರು ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದಿದೆ. ಈ ಹಿಂದೆ ಮೋದಿ ಅವರು ರಾಮಮಂದಿರ ಭೂಮಿ ವಿಚಾರವಾಗಿ ಕಾಂಗ್ರೆಸ್ ಎಂದಿಗೂ ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಆರೋಪಿಸಿತ್ತು. ಆದರೆ ಈಗ ಈ ಪ್ರಕರಣದ ತನಿಖೆಯನ್ನು ನ್ಯಾಯಾಲಯಕ್ಕೆ ಯಾಕೆ ನೀಡುತ್ತಿಲ್ಲ? ರಾಜ್ಯದಿಂದಲೂ ಮಂದಿರಕ್ಕಾಗಿ ಅನೇಕ ಜನ ದೇಣಿಗೆ ನೀಡಿದ್ದು, ಈ ಅವ್ಯವಹಾರ ವಿಚಾರವಾಗಿ ಉನ್ನತಮಟ್ಟದ ತನಿಖೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ’ ಎಂದರು.

‘ಇನ್ನು ಶಿವಮೊಗ್ಗ ವಿಮಾನ ನಿಲ್ದಾಣ ವಿಚಾರವಾಗಿ ಸಂಸದರಾದ ಬಿ.ವೈ ರಾಘವೇಂದ್ರ ಅವರು ಕಮಲ ರಾಷ್ಟ್ರೀಯ ಪುಷ್ಪ. ಹೀಗಾಗಿ ನಾವು ಆ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. ರಾಘವೇಂದ್ರ ಅವರೇ ಚುನಾವಣಾ ಆಯೋಗ ಕಿವಿಗೆ ಕಮಲದ ಹೂವಿಟ್ಟುಕೊಂಡಿಲ್ಲ. ಮುಂದಿನ ಒಂದುವಾರದಲ್ಲಿ ನಿಮ್ಮ ನಿರ್ಧಾರ ಹಿಂಪಡೆಯದಿದ್ದರೆ ನಾವು ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್ ನಾಯಕರಾದ ಜಿ.ಎ ಬಾವಾ, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ ಹಾಗೂ ಸಲೀಂ ಉಪಸ್ಥಿತರಿದ್ದರು.

Join Whatsapp
Exit mobile version