Home ಕರಾವಳಿ ಹಾಜಬ್ಬ ಪ್ರಯತ್ನಕ್ಕೆ ಫಲ: ಹರೇಕಳಕ್ಕೆ ಪದವಿಪೂರ್ವ ಕಾಲೇಜು

ಹಾಜಬ್ಬ ಪ್ರಯತ್ನಕ್ಕೆ ಫಲ: ಹರೇಕಳಕ್ಕೆ ಪದವಿಪೂರ್ವ ಕಾಲೇಜು

ಮಂಗಳೂರು: ಕಿತ್ತಳೆ ಹಣ್ಣು ವ್ಯಾಪಾರಿ ಹರೇಕಳ ಹಾಜಬ್ಬ ಪರಿಶ್ರಮಕ್ಕೆ ಯಶಸ್ಸು ದೊರೆತಿದ್ದು, ಉಳ್ಳಾಲ ತಾಲ್ಲೂಕಿನ ಹರೇಕಳದಲ್ಲಿ ಅವರು ನಿರ್ಮಿಸಿದ್ದ ಪ್ರೌಢಶಾಲೆಯು ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಲಿದೆ.

ಹರೇಕಳ ಪರಿಸರದಲ್ಲಿ ಪದವಿಪೂರ್ವ ಕಾಲೇಜು ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣದ ಕಾಲೇಜುಗಳಿಗೆ ಹೋಗಬೇಕಾದ ಸ್ಥಿತಿ ಇದೆ. ಹಾಗಾಗಿ ಇಲ್ಲಿನ ಪ್ರೌಢ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಬೇಕು ಎಂದು ಹರೇಕಳ ಹಾಜಬ್ಬ ಅನೇಕ ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಹಾಜಬ್ಬ ಅವರ ಮನವಿಗೆ ಸ್ಪಂದಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಪದವಿ ಪೂರ್ವ ಶಿಕ್ಷಣ) ಇಲ್ಲಿನ ಸರ್ಕಾರಿ ಪ್ರೌಢಶಾಲೆಯನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಆಗಿ ಉನ್ನತೀಕರಿಸಲು ಈಚೆಗೆ ಆದೇಶ ಹೊರಡಿಸಿದೆ. ಇಲಾಖೆಯಲ್ಲಿ ಈಗಾಗಲೇ ಮಂಜೂರಾಗಿರುವ ಹುದ್ದೆಗಳನ್ನು ಬಳಸಿಕೊಂಡು ಹಾಗೂ ಲಭ್ಯ ಸಂಪನ್ಮೂಲಗಳಿಂದ ವೆಚ್ಚವನ್ನು ಭರಿಸುವ ಷರತ್ತಿಗೆ ಒಳಪಟ್ಟು ಪಿ.ಯು. ಕಾಲೇಜು ಆರಂಭಿಸುವುದಕ್ಕೆ ಮಂಜೂರಾತಿ ನೀಡಿದೆ.

ಹರೇಕಳ ಹಾಜಬ್ಬ ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿ ಹಣ ಉಳಿಸಿ ತಮ್ಮ ಊರಿನಲ್ಲಿ ಶಾಲೆಯನ್ನು ಕಟ್ಟಿಸಿದ್ದರು. ಅವರ ಶಿಕ್ಷಣ ಪ್ರೀತಿಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Join Whatsapp
Exit mobile version