ನವದೆಹಲಿ: ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸಾವಿನ ಶೋಕಾಚರಣೆಯ ನೆಪದಲ್ಲಿ ಗುರ್ಗಾಂವ್ ನಲ್ಲಿ ಸ್ಥಳೀಯರು ಮತ್ತು ಸಂಘಪರಿವಾರದ ಕಾರ್ಯಕರ್ತರು ವಾಹನಗಳನ್ನು ಅಡ್ಡಗಟ್ಟುವ ಮೂಲಕ ಮತ್ತೆ ನಮಾಝ್ ಗೆ ಅಡ್ಡಿಪಡಿಸಿದರು.
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಇತರ ಸಿಬ್ಬಂದಿಗಳ ನಿಧನಕ್ಕೆ ಸಂತಾಪ ಸೂಚನೆಯ ನೆಪದಲ್ಲಿ ತಮ್ಮ ವಾಹನಗಳನ್ನು ಅಡ್ಡಗಟ್ಟಿ ಸಂಘಪರಿವಾರದ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುರ್ಗಾಂವ್ ನ ಸೆಕ್ಟರ್ 37 ರಲ್ಲಿ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಮತ್ತು ಮುಸ್ಲಿಮ್ ವಿರೋಧಿ ಘೋಷಣೆ ಕೂಗುತ್ತಾ ನಮಾಝ್ ನಿರ್ವಹಿಸದಂತೆ ತಡೆವೊಡ್ಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಕಳೆದ ಸುಮಾರು 3 ತಿಂಗಳುಗಳಿಂದ ಸಂಘಪರಿವಾರದ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ನಿರಂತರ ಅಡ್ಡಿಪಡಿಸುತ್ತಲೇ ಬಂದಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಡವಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಹಿಂದೆ ನಮಾಝ್ ನಿರ್ವಹಿಸುವ ಸ್ಥಳದಲ್ಲಿ ಸಂಯುಕ್ತ ಹಿಂದೂ ಸಂಘರ್ಷ ಸಮಿತಿ ವತಿಯಿಂದ ಪೂಜೆಯನ್ನು ಹಮ್ಮಿಕೊಂಡಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕೂಡ ಭಾಗವಹಿಸಿದ್ದರು.