Home ಟಾಪ್ ಸುದ್ದಿಗಳು ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾ ಭೇಟಿಯಂದೇ ಹಲವು ನಾಯಕರು ಕಾಂಗ್ರೆಸ್ ಗೆ ರಾಜೀನಾಮೆ

ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾ ಭೇಟಿಯಂದೇ ಹಲವು ನಾಯಕರು ಕಾಂಗ್ರೆಸ್ ಗೆ ರಾಜೀನಾಮೆ

ಪಣಜಿ: ಗೋವಾದಲ್ಲಿ ಮುಂಬರುವ ಚುನಾವಣೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಗೋವಾ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ ಹಲವು ಹಿರಿಯ ನಾಯಕರು ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭೇಟಿಯ ದಿನದಂದೇ ರಾಜೀನಾಮೆ ನೀಡಿರುವುದು ವಿಶೇಷ.

ಗೋವಾದ ಪೊರ್ವೊರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಹಲವು ಮುಖಂಡರು ಶುಕ್ರವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ. 2022 ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಗಂಭೀರವಾಗಿ ಚಿಂತನೆ ನಡೆಸಿಲ್ಲ ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮುಂಬರುವ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಪಕ್ಷದ ಕೆಲವು ನಾಯಕರ ಧೋರಣೆಯಿಂದಾಗಿ ತುಂಬಾ ನಿರಾಶೆಯಾಗಿದೆ ಎಂದು ಪೊರ್ವೊರಿಮ್ ನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗುಪೇಶ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ನ ಹಿರಿಯ ನಾಯಕ ಮೊರೆನೊ ರೆಬೆಲೊ, ಅಲೆಕ್ಸೊ ರೆಜಿನಾಲ್ಡೊ ಸೇರಿದಂತೆ ಹಲವು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೋವಾ ಭೇಟಿಯ ವೇಳೆ ಯುವಕ, ಮಹಿಳೆಯರೊಂದಿಗೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Join Whatsapp
Exit mobile version