ಗುರ್ಗಾಂವ್:: ಮನೆಗೆ ತೆರಳಲು ಆಟೋ ಹತ್ತಿದ ಯುವತಿಯನ್ನು ಬೇರೆ ದಾರಿಯಲ್ಲಿ ಕರೆದೊಯ್ದ ಆಟೋ ಚಾಲಕನ ನಡೆಯಿಂದ ಭಯಗೊಂಡ ಯುವತಿಯು, ಚಲಿಸುತ್ತಿದ್ದ ಆಟೋದಿಂದ ಜಿಗಿದು ಆಸ್ಪತ್ರೆ ಸೇರಿದ ಘಟನೆ ಗುರ್ಗಾಂವ್’ನ ಸೆಕ್ಟರ್ 22ರಲ್ಲಿ ನಡೆದಿದೆ.
ನಿಶಿತಾ ಪಲಿವಾಲ್ ಎಂಬಾಕೆ ತನಗಾದ ಅನುಭವದ ಬಗ್ಗೆ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ. ಮಾರುಕಟ್ಟೆಯಿಂದ ಮಧ್ಯಾಹ್ನದ ವೇಳೆಗೆ ತಾನು ಮನೆಗೆ ತೆರಳಲು ಆಟೋ ಹತ್ತಿದೆ. ಆದರೆ ಚಾಲಕ ನಮ್ಮ ಮನೆಗೆ ಹೋಗುವ ದಾರಿಯ ಬದಲು ಬೇರೆ ದಾರಿಯಲ್ಲಿ ಆಟೋ ಚಲಾಯಿಸಿದ್ದಾನೆ. ಆಟೋ ನಿಲ್ಲಿಸುವಂತೆ ಜೋರಾಗಿ ಕೂಗಿಕೊಂಡರೂ ಆತ ಕೇಳಿಸಿಕೊಳ್ಳಲಿಲ್ಲ. ಹೀಗಾಗಿ ಆಟೋದಿಂದ ಹೊರಗೆ ಜಿಗಿಯುವ ನಿರ್ಧಾರ ಮಾಡಿದೆ. ಜೀವವನ್ನು ಕಳೆದುಕೊಳ್ಳುವುದಕ್ಕಿಂತ, ಮೂಳೆಗಳನ್ನು ಮುರಿದುಕೊಳ್ಳುವುದು ಸೂಕ್ತವಾದ ನಿರ್ಧಾರವೆಂದು ಆ ಕ್ಷಣದಲ್ಲಿ ನಾನು ಭಾವಿಸಿದೆ ಎಂದು ನಿಶಿತಾ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.
ಘಟನೆ ನಡೆದ ಮರುದಿನ ಪಾಲಮ್ ವಿಹಾರ್ ಪೊಲೀಸ್ ಠಾಣೆಗೆ ತೆರಳಿದ ನಿಶಿತಾ ದೂರು ದಾಖಲಿಸಿದ್ದು, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರುಕಟ್ಟೆಯಿಂದ ನಿಶಿತಾಳ ಮನೆಗೆ ಕೇವಲ 7 ನಿಮಿಷಗಳ ದೂರವಿದ್ದರೂ, ಆಟೋ ಚಾಲಕ ಬೇರೆ ದಾರಿಯಾಗಿ ಸಾಗಿದ್ದು ಅನುಮಾನ ಮೂಡುವಂತೆ ಮಾಡಿದೆ. ಯುವತಿಯು ಸಂಚರಿಸಿದ ರಸ್ತೆಗಳ CCTV ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಆರೋಪಿ ಆಟೋ ಚಾಲಕನನ್ನು ಬಂಧಿಸಲಾಗುವುದು ಎಂದು ಪಾಲಮ್ ವಿಹಾರ್ ಠಾಣೆಯ ಇನ್ಸ್’ಪೆಕ್ಟರ್ ಜಿತೇಂದರ್ ಯಾದವ್ ಹೇಳಿದ್ದಾರೆ.