Home ಟಾಪ್ ಸುದ್ದಿಗಳು ಅನಾಥಾಶ್ರಮದಲ್ಲಿ ಆತಂಕ ಸೃಷ್ಟಿಸಿದ ಮಕ್ಕಳ ಆಯೋಗದ ವಿರುದ್ಧ ಸರಕಾರ ಕಠಿಣ ಕ್ರಮ ಜರಗಿಸಿ ನ್ಯಾಯ ಒದಗಿಸಲಿ:...

ಅನಾಥಾಶ್ರಮದಲ್ಲಿ ಆತಂಕ ಸೃಷ್ಟಿಸಿದ ಮಕ್ಕಳ ಆಯೋಗದ ವಿರುದ್ಧ ಸರಕಾರ ಕಠಿಣ ಕ್ರಮ ಜರಗಿಸಿ ನ್ಯಾಯ ಒದಗಿಸಲಿ: WIM ಒತ್ತಾಯ

ಬೆಂಗಳೂರು: ಬೆಂಗಳೂರಿನ ಅಶ್ವತ್ಥ ನಗರದ ಹೆಣ್ಣು ಮಕ್ಕಳ ವಸತಿ ಮದ್ರಸಾಕ್ಕೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗದ ತಂಡವು ಹೆಣ್ಣು ಮಗಳೋರ್ವಳ ಕೆನ್ನೆಗೆ ಹೊಡೆದಿರುವ ಘಟನೆ ವರದಿಯಾಗಿದ್ದು, ವಿಮೆನ್ ಇಂಡಿಯಾ (WIM) ಮೂವ್ಮೆಂಟ್ ತೀವ್ರವಾಗಿ ಖಂಡಿಸಿದೆ.

ಕಾನೂನು ಬದ್ಧವಾಗಿ ನಡೆಯುತ್ತಿದ್ದ ಅನಾಥಾಶ್ರಮಕ್ಕೆ ಅಧಿಕಾರ ದುರುಪಯೋಗ ಮಾಡಿಕೊಂಡು ದಿಢೀರನೆ ನುಗ್ಗಿ ಆತಂಕ ಸೃಷ್ಟಿಸಿರುವುದು ಅಮಾನವೀಯ ಹಾಗೂ ತೀರಾ ಅಕ್ಷಮ್ಯವಾಗಿದೆ. ಸಂಪಿಗೆಹಳ್ಳಿ ಪೋಲೀಸ್ ಠಾಣೆಯ ಹೊರಗಡೆ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಎನ್ ಸಿ ಪಿ ಸಿ ಆರ್ ಅಧ್ಯಕ್ಷ ಪ್ರಿಯಾಂಕ ಕನೊಂಗೋಗೆ ಮಕ್ಕಳ ಬಗ್ಗೆ ಇರುವ ಕಾಳಜಿಗಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎಂಬುದು ಅವರ ಹೇಳಿಕೆ ಮತ್ತು ನಡೆಗಳಿಂದ ತಿಳಿದು ಬರುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಆಯೋಗದ ತಂಡ ತನ್ನ ಕರ್ತವ್ಯಕ್ಕೆ ವ್ಯತಿರಿಕ್ತವಾಗಿ RSS ನ ಕೈಗೊಂಬೆಯಾಗಿರುವುದು ಖಂಡನೀಯ. ನಿರ್ದಿಷ್ಟ ಸಮುದಾಯದ ವಿರುದ್ಧ ಸುಳ್ಳಾರೋಪಗಳನ್ನು ಹೊರಿಸಿ, ದುಷ್ಕ್ರತ್ಯಗಳನ್ನೆಸಗಿ, ಧ್ರುವೀಕರಿಸಿ ಮತ ಹಾಗೂ ಪ್ರಚಾರಗಿಟ್ಟಿಸುವುದು RSS ಮನಸ್ಥಿತಿ ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ಬಲವಾದ ಚಾಳಿಯಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಹೇಳಿದೆ.

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿಎಸ್ ಯಡಿಯೂರಪ್ಪರಿಂದ ಲೈಂಗಿಕ ದೌರ್ಜನಿಕ್ಕೀಡಾಗಿರುವ ಅಪ್ರಾಪ್ತ ಸಂತ್ರಸ್ತೆಗೆ ಕನಿಷ್ಠ ಬೆಂಬಲವನ್ನೂ ನೀಡಲು ಇಚ್ಛಾಶಕ್ತಿ ಇಲ್ಲದ ಎನ್ ಸಿ ಪಿ ಸಿ ಆರ್ ಅಧ್ಯಕ್ಷರ ಪಕ್ಷಪಾತಿ ಧೋರಣೆ ಪೂರ್ವಗ್ರಹ ಪೀಡಿತವಾಗಿದೆ. ಇದು ಮಹಿಳಾ ಕುಲಕ್ಕೇ ಮಾಡಿರುವಂತಹ ಅವಮಾನವಾಗಿದೆ ಮತ್ತು ದ್ವೇಷ ರಾಜಕೀಯದ ಭಾಗವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಹೇಳಿದೆ.

ಮುಸ್ಲಿಮರ ಅನ್ಯಾಯದ ಬಗ್ಗೆ ಜಾಣ ಕುರುಡು ಪ್ರದರ್ಶಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಎಂದಿನ ನಿರ್ಲಕ್ಷ್ಯಭಾವ ಅಕ್ಷಮ್ಯ. ತಕ್ಷಣ ಆಯೋಗದ ನಡೆಯ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಧಿಕಾರದ ದುರುಪಯೋಗ ಪುನರಾವರ್ತನೆಯಾಗದಂತೆ ತಡೆಯಬೇಕು. ಸಂತ್ರಸ್ತ ವಿದ್ಯಾರ್ಥಿನಿಯರು ಮತ್ತು ಸಂಸ್ಥೆಗೆ ನ್ಯಾಯ ಒದಗಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯಧ್ಯಕ್ಷೆ ಫಾತಿಮ ನಸೀಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version