Home ಟಾಪ್ ಸುದ್ದಿಗಳು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲ: ವೆಲ್ಫೇರ್ ಪಾರ್ಟಿ

ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲ: ವೆಲ್ಫೇರ್ ಪಾರ್ಟಿ

ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ಜಿ.ಎಸ್.ಟಿ ವಿಧಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು.

ಪಕ್ಷದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಜೀವನಾವಶ್ಯಕ ವಸ್ತುಗಳ ಮೇಲೆ ವಿಧಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಜೂನ್ ನಲ್ಲಿ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಇದು ಜನಸಾಮಾನ್ಯರ ವಿರೋಧಿಯಾಗಿದೆ. ಜಿಎಸ್ ಟಿಯನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಅಕ್ಕಿ, ಜೋಳ, ರಾಗಿ, ಹಾಲು, ಮೊಸರು ಮುಂತಾದ ಆಹಾರ ಪದಾರ್ಥಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳಾಗಿವೆ. ಇವುಗಳ ಮೇಲಿನ ತೆರಿಗೆಯಿಂದ ಜನ ಸಾಮಾನ್ಯರ ಜೀವನ ವೆಚ್ಚ ದುಬಾರಿಯಾಗುತ್ತದೆ. ಈಗಾಗಲೇ ಬೆಲೆ ಏರಿಕೆ, ಹಣ ದುಬ್ಬರಗಳಿಂದ ಜನ ತತ್ತರಿಸಿದ್ದಾರೆ. ಬೆಲೆ ಏರಿಕೆಗೆ ತಕ್ಕಂತೆ ಜನ ಸಾಮಾನ್ಯರ ಆದಾಯ ಹೆಚ್ಚಳವಾಗಿಲ್ಲ. ಇಂಥ ಸಂದರ್ಭದಲ್ಲಿ ತಿನ್ನುವ ಆಹಾರದ ಮೇಲೆ ತೆರಿಗೆ ವಿಧಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದರು.

ಹಾಲು, ಮೊಸರಿಗೂ ಜಿ.ಎಸ್.ಟಿ. ಹೇರಿರುವ ಸರ್ಕಾರದ ಕ್ರಮದಿಂದ ರೈತರಿಗೆ ತೊಂದರೆಯಾಗಿದೆ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿಯೂ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದರಿಂದ ಜನರಿಗೆ ಸರ್ಕಾರ ದ್ರೋಹವೆಸಗುತ್ತಿದೆ ಎಂದು ತಿಳಿಸಿದರು.

ಕಾರ್ಪೋರೇಟ್ ಕಂಪನಿಗಳ ಮತ್ತು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ ಅವರಿಗೆ ಅನುಕೂಲ ಮಾಡುವ ಸರ್ಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸರ್ಕಾರದ ಈ ನಿರ್ಧಾರ ಅತ್ಯಂತ ಜನವಿರೋಧಿಯಾಗಿದೆ. ರಾಜ್ಯಗಳಿಗೆ ಕೊಡಬೇಕಾದ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ.ಕೂಡಲೇ ಸರ್ಕಾರ ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ಹಿಂಪಡೆಯಲಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷ ತಲತ್ ಯಾಸ್ಮಿನ್, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ಸಫೀರ್ ಆಸಿಫ್, ಕಾರ್ಯದರ್ಶಿ ಫಝಲ್ ಅಹ್ಮದ್, ಮೈನುದ್ದೀನ್ ಖಮರ್ ಸುಲೈಮಾನ್, ಸಲಾಂ ಸೇರಿದಂತೆ ಇನ್ನೆತರೂ ಉಪಸ್ಥಿತರಿದ್ದರು.

Join Whatsapp
Exit mobile version