Home ಟಾಪ್ ಸುದ್ದಿಗಳು ಬಾಂಗ್ಲಾದವರಿಗೆ ಆಶ್ರಯ ಹೇಳಿಕೆ: ಸಿಎಂ ಮಮತಾ ಬ್ಯಾನರ್ಜಿ ಅವರಿಂದ ವರದಿ ಕೇಳಿದ ರಾಜ್ಯಪಾಲ

ಬಾಂಗ್ಲಾದವರಿಗೆ ಆಶ್ರಯ ಹೇಳಿಕೆ: ಸಿಎಂ ಮಮತಾ ಬ್ಯಾನರ್ಜಿ ಅವರಿಂದ ವರದಿ ಕೇಳಿದ ರಾಜ್ಯಪಾಲ

ಕೋಲ್ಕತ್ತ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಸಹಾಯಕ ಜನರಿಗೆ ಆಶ್ರಯ ನೀಡುವ ಹೇಳಿಕೆ ಸಂಬಂಧ ವರದಿ ನೀಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯಪಾಲ ಸಿ. ವಿ .ಆನಂದ ಬೋಸ್ ವರದಿ ಕೇಳಿದೆ ಎಂದು ರಾಜಭವನ ತಿಳಿಸಿದೆ.

ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜಭವನ ಮಾಧ್ಯಮ ಕೋಶ, ‘ಬಾಹ್ಯ ವ್ಯವಹಾರಗಳನ್ನು ನಿಭಾಯಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ’ ಎಂದು ಹೇಳಿದೆ.
‘ನೆರೆಯ ದೇಶದಿಂದ ಬರುವ ಜನರಿಗೆ ಆಶ್ರಯ ಕಲ್ಪಿಸುವ ವಿಷಯವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ವಿದೇಶಿಗರಿಗೆ ಆಶ್ರಯ ನೀಡುವ ಕುರಿತು ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಇದು ತುಂಬಾ ಗಂಭೀರವಾದ ವಿಚಾರ’ ಎಂದು ಹೇಳಿದೆ.


‘ಈ ವಿಷಯಕ್ಕೆ ಸಂಬಂಧಿಸಿದಂತೆ ಸಂವಿಧಾನದ 167ನೇ ವಿಧಿಯ ಅಡಿಯಲ್ಲಿ ಸಮಗ್ರ ವರದಿಯನ್ನು ನೀಡುವಂತೆ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಕರೆ ನೀಡಿದ್ದಾರೆ. ಯಾವ ಆಧಾರದ ಮೇಲೆ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡಲಾಗಿದೆ? ಕೇಂದ್ರ ಸರ್ಕಾರದಿಂದ ಒಪ್ಪಿಗೆಯ ಪಡೆಯದೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ವಲಸೆ ಜನರಿಂದ ರಾಜ್ಯದ ಗಡಿ ಭಾಗದ ಜನರ ಜೀವನ ಶೈಲಿ ಮತ್ತು ಜನಸಂಖ್ಯೆಯ ಮೇಲೆ ಪರಿಣಾಮ ಬೀಳುವ ಬಗ್ಗೆ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಕೇಳಲಾಗಿದೆ’ ಎಂದು ಅದು ತಿಳಿಸಿದೆ.

Join Whatsapp
Exit mobile version