Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಸಂಘಪರಿವಾರದ ಕೋಮು ದ್ವೇಷ ಹೆಚ್ಚುತ್ತಿದ್ದರೂ ಸರಕಾರ ಮೌನ ಖಂಡನೀಯ: ತಾಹೀರ್ ಹುಸೇನ್

ರಾಜ್ಯದಲ್ಲಿ ಸಂಘಪರಿವಾರದ ಕೋಮು ದ್ವೇಷ ಹೆಚ್ಚುತ್ತಿದ್ದರೂ ಸರಕಾರ ಮೌನ ಖಂಡನೀಯ: ತಾಹೀರ್ ಹುಸೇನ್

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕೋಮು ದ್ವೇಷ ಹೆಚ್ಚಾಗುತ್ತಿದ್ದು, ಅಲ್ಪಸಂಖ್ಯಾತರ ಮೇಲೆ ದಾಳಿ, ದೌರ್ಜನ್ಯ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಿರಂತರ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಬದಲಿಗೆ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿ ಕಿಡಿಗೇಡಿಗಳಿಗೆ ಪ್ರೋತ್ಸಾಹ ನೀಡಿದ್ದಾರೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೆಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾರ್ಥನಾ ಸ್ಥಳಗಳ ಮೇಲೆ ಗೂಂಡಾಗಳು ಹಲ್ಲೆ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಪೂಜೆ ಪುರಸ್ಕಾರ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ, ಆದರೆ ಒಂದು ಶಾಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳಿಗೆ ವಾರದಲ್ಲಿ ಒಮ್ಮೆ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದಕ್ಕೆ ಅಲ್ಲಿ ಕೆಲ ಕೆಡೆಗೇಡಿಗಳು ದಾಂದಲೆ ನಡೆಸಿ, ಸರಕಾರ ದಿಂದ ಒತ್ತಡ ತಂದು ಮುಖ್ಯ ಶಿಕ್ಷಕಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.


ಅದೇ ರೀತಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಬಹಳ ವರ್ಷ ಗಲ್ಲಿಂದ ಹಿಂದೂ ದೇವಾಲಯ, ಕ್ರೈಸ್ತರ ಪಾರ್ಥನಾ ಮಂದಿರ ಮತ್ತು ಮುಸಲ್ಮಾನರ ಪ್ರಾರ್ಥನಾ ಸ್ಥಳ ಇದ್ದು ಇದುವರೆಗೆ ಸೌಹಾರ್ದತೆಯಿಂದ ನಡೆಯುತ್ತಿತ್ತು. ಆದರೆ ಎರಡು ದಿನಗಳ ಹಿಂದೆ ಮತ್ತೆ ಕೆಲ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಕೇವಲ ಮುಸ್ಲಿಂ ಪ್ರಾರ್ಥನಾ ಸ್ಥಳವನ್ನು ಗುರಿ ಮಾಡಿ ಅಲ್ಲಿ ದಾಂಧಲೆ ನಡೆಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಎರಡು ಮುಸ್ಲಿಂ ಯುವಕರ ಹತ್ಯೆ ಸಂಘಪರಿವಾರದ ಕಾರ್ಯಕರ್ತರಿಂದ ನಡೆದಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ. ಇದರಿಂದ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ. ಸರಕಾರ ಕೂಡಲೇ ಎಚ್ಚೆತ್ತು ಪರಿಸ್ಥಿತಿ ಹತೋಟಿಗೆ ತರಲು ಕಠಿಣ ಕ್ರಮಗಳು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಸಂಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

Join Whatsapp
Exit mobile version