ಸುರತ್ಕಲ್: ಮಾರಕಾಸ್ತ್ರಗಳಿಂದ ಕಡಿದು ಯುವಕನ ಕೊಲೆ ಯತ್ನ

Prasthutha|

ಮಂಗಳೂರು: ಬಾಡಿಗೆ ಮನೆ ತೆರವು ವಿವಾದಕ್ಕೆ ಸಂಬಂಧಿಸಿ ತಂಡವೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಯತ್ನ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.

- Advertisement -

ಕಾಟಿಪಳ್ಳದ 2ನೇ ಬ್ಲಾಕ್ ನಿವಾಸಿ ಮುಹಮ್ಮದ್ ಅನಸ್ (29) ಗಂಭೀರ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ನಡೆಸಿದ ಆರೋಪದಲ್ಲಿ ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಚಾರು, ರವೂಫ್, ಅಕ್ಕಿ, ಮುಸ್ತಫಾ ಹಾಗೂ ಇತರ 8 ಮಂದಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಐಪಿಸಿಯ 143, 148, 341, 504, 307, 149 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

- Advertisement -

ಕಳೆದ ರಾತ್ರಿ 11.45ರ ಸುಮಾರಿಗೆ ಮುಹಮ್ಮದ್ ಅನಸ್ ಅವರು ತಮ್ಮ ಸ್ನೇಹಿತರಾದ ಅಬೂಬಕ್ಕರ್ ಮತ್ತು ಹ್ಯಾರಿಸ್ ಅವರೊಂದಿಗೆ 6ನೇ ಬ್ಲಾಕ್ ನಲ್ಲಿರುವ ಅವರ ಮನೆಯ ಮುಂಭಾಗ ನಿಂತು ಮಾತನಾಡುತ್ತಿದ್ದಾಗ, ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.

ಆರೋಪಿಗಳಾದ ಚಾರು ಮತ್ತು ರವೂಫ್ ಅವರು ವಾಸವಾಗಿದ್ದ ಬಾಡಿಗೆ ಮನೆ ತೆರವು ಮಾಡಲು ಮುಹಮ್ಮದ್ ಅನಸ್ ಮಧ್ಯಸ್ಥಿಕೆ ವಹಿಸಿದ್ದರು. ಇದೇ ಕಾರಣಕ್ಕೆ ಕೊಲೆಗೆ ಯತ್ನ ನಡೆದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version