ಶಿಮ್ಲಾ: ಹಿಮಾಚಲ ಪ್ರದೇಶದ ಎಲ್ಲಾ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿದೆ. ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ರಾಜ್ಯದ ವರ್ಚಸ್ಸನ್ನು ಹಾಳುಗೆಡವಲು ದೆಹಲಿಯಲ್ಲಿ ಈ ಬಗ್ಗೆ ಸುಳ್ಳು ಅಭಿಯಾನ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಹಿಮಾಚಲದ ಯಾವುದೇ ಸುದ್ದಿ ವಾಹಿನಿಗಳಿಗೆ ಅಂತಹ ಮಾಹಿತಿ ತಿಳಿದಿಲ್ಲ. ಆದರೆ ದೆಹಲಿಯಲ್ಲಿ ಈ ವದಂತಿಗಳು ಹರಡುತ್ತಿರುವುದು ಅಚ್ಚರಿ ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 15 ಸಾವಿರ ಸರ್ಕಾರಿ ನೌಕರರಿಗೆ ಇನ್ನೂ ಮಾಸಿಕ ವೇತನ ಪಾವತಿಯಾಗಿಲ್ಲ ಎಂಬ ಸುದ್ದಿ ಹರಿದಾಡಿತ್ತು.