Home ಟಾಪ್ ಸುದ್ದಿಗಳು ಮರದ ಕೊಂಬೆ ಬಿದ್ದು ಗಾಯಗೊಂಡ ಬಾಲಕಿ 702 ದಿನಗಳ ಚಿಕಿತ್ಸೆ ಫಲಿಸದೇ ಸಾವು

ಮರದ ಕೊಂಬೆ ಬಿದ್ದು ಗಾಯಗೊಂಡ ಬಾಲಕಿ 702 ದಿನಗಳ ಚಿಕಿತ್ಸೆ ಫಲಿಸದೇ ಸಾವು

ಬೆಂಗಳೂರು: ಶಾಲೆಗೆ ಹೋಗುವಾಗ ಮರದ ಕೊಂಬೆ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ತ್ರಿಷಾ (9) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಸುಮಾರು 702 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತ್ರಿಷಾ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

 ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 702 ದಿನಗಳ ಸತತ ಚಿಕಿತ್ಸೆಯ ನಂತರವೂ ತ್ರಿಷಾಳನ್ನು ಉಳಿಸಿಕೊಳ್ಳಲಾಗಿಲ್ಲ.

ಕಳೆದ 2020ರ ಮಾರ್ಚ್ 11ರಂದು ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ಒಣಗಿದ ರೆಂಬೆ ಬಿದ್ದು ಬಾಲಕಿ ತ್ರಿಷಾ ತೀವ್ರವಾಗಿ ಗಾಯಗೊಂಡಿದ್ದರು. ಆ ವೇಳೆ ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಬಿಬಿಎಂಪಿ ಒಪ್ಪಿಕೊಂಡಿತ್ತು. ಅಲ್ಲದೆ ಸ್ಥಳೀಯ ಕಾರ್ಪೋರೇಟರ್ ಪದ್ಮಾವತಿ ಶ್ರೀನಿವಾಸ್ ಅವರು ಬಾಲಕಿಯ ಕುಟುಂಬಕ್ಕೆ 1 ಲಕ್ಷ ರೂ ಪರಿಹಾರ ನೀಡಿದ್ದರು.

ಗಾಯಗೊಂಡಿದ್ದ ತ್ರಿಷಾಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಆಸ್ಪತ್ರೆಯಲ್ಲೇ ಸುಮಾರು 702 ದಿನಗಳ ಸತತ ಚಿಕಿತ್ಸೆಯ ನಂತರವೂ ತ್ರಿಷಾ ಬದುಕುಳಿಯಲಿಲ್ಲ. ಬದುಕಿನ  ಯುದ್ಧದಲ್ಲಿ ಹೋರಾಡುತ್ತಲೇ ಪ್ರಾಣ ಬಿಟ್ಟಿದ್ದಾಳೆ.

Join Whatsapp
Exit mobile version