Home ಟಾಪ್ ಸುದ್ದಿಗಳು ಗಾಝಾದಲ್ಲಿ ಕದನ ವಿರಾಮ: ಇಸ್ರೇಲ್‌ನ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹೇಳಿದ ಹಮಾಸ್‌

ಗಾಝಾದಲ್ಲಿ ಕದನ ವಿರಾಮ: ಇಸ್ರೇಲ್‌ನ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹೇಳಿದ ಹಮಾಸ್‌

ಗಾಝಾ: ಗಾಝಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧವಾಗಿ ಇಸ್ರೇಲ್‌ನ ಪ್ರತಿಕ್ರಿಯೆಗೆ ಕಾಯುತ್ತಿರುವುದಾಗಿ ಹಮಾಸ್‌ನ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಕದನ ವಿರಾಮ ಪ್ರಸ್ತಾವದ ಕುರಿತು ಇಸ್ರೇಲ್‌ – ಕತಾರ್‌ ನಡುವೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹಮಾಸ್‌ನ ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ಹಮಾಸ್‌ ನೀಡಿರುವ ಪ್ರತಿಕ್ರಿಯೆ ಸಂಬಂಧ ಕತಾರ್‌ನ ಪ್ರತಿನಿಧಿಗಳು ಇಸ್ರೇಲ್‌ ಜತೆ ಚರ್ಚಿಸಿದ್ದಾರೆ. ಇಸ್ರೇಲ್‌ನ ಪ್ರತಿಕ್ರಿಯೆಯನ್ನು ಒಂದೆರಡು ದಿನಗಳಲ್ಲಿ ನಮಗೆ ತಿಳಿಸುವ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ.

ಇಸ್ರೇಲ್‌-ಹಮಾಸ್‌ ಯುದ್ಧ ಕೊನೆಗೊಳಿಸಲು ಅಮೆರಿಕ ಮುಂದಿಟ್ಟಿದ್ದ ಕದನ ವಿರಾಮ ಪ್ರಸ್ತಾವದಲ್ಲಿದ್ದ ಕೆಲವು ಪ್ರಮುಖ ಅಂಶಗಳನ್ನು ಹಮಾಸ್‌ ಕಳೆದ ವಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.

ಕದನ ವಿರಾಮಕ್ಕೆ ಸಂಬಂಧಿಸಿದ ಮೂರು ಹಂತದ ಯೋಜನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಮೇ ತಿಂಗಳ ಕೊನೆಯಲ್ಲಿ ಮುಂದಿಟ್ಟಿದ್ದರು. ಇದಕ್ಕೆ ಕತಾರ್‌ ಮತ್ತು ಈಜಿಪ್ಟ್‌ ದೇಶಗಳು ಮಧ್ಯಸ್ಥಿಕೆ ವಹಿಸಿವೆ. ಯುದ್ಧವನ್ನು ಕೊನೆಗಳಿಸುವ ಮತ್ತು ಹಮಾಸ್‌ ವಶದಲ್ಲಿರುವ 120 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಈ ಪ್ರಸ್ತಾವ ಹೊಂದಿದೆ.

ಇಸ್ರೇಲ್‌ನಲ್ಲಿ ಮುಂದುವರಿದ ಪ್ರತಿಭಟನೆ: ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಭಾನುವಾರ ಇಸ್ರೇಲ್‌ನ ವಿವಿಧೆಡೆ ಪ್ರತಿಭಟನೆ ನಡೆಯಿತು. ಪ್ರಮುಖ ನಗರಗಳಲ್ಲಿ ಬೀದಿಗಿಳಿದ ಜನರು, ರಸ್ತೆ ತಡೆ ನಡೆಸಿದರು. ರಾಜಕಾರಣಿಗಳ ಮನೆಗಳ ಹೆದ್ದಾರಿಯಲ್ಲಿ ಟೈರ್‌ಗಳನ್ನು ಹೊತ್ತಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

Join Whatsapp
Exit mobile version